

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದೈನಂದಿನ ಕರೊನಾ ಸೋಂಕಿತರು ಮತ್ತು ಸಾವಿನ ಸಂಖ್ಯೆ ಶನಿವಾರ ಕೂಡ ಏರುಗತಿಯಲ್ಲೇ ಸಾಗಿದೆ.
ಶಿವಾರ ಜಿಲ್ಲೆಯಲ್ಲಿ ಹೊಸ 832 ಜನರಲ್ಲಿ ಕರೊನಾ ಸೋಂಕು ದೃಢಪಟ್ಟಿದೆ. ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ 16 ಮಂದಿ ಮೃತಪಟ್ಟಿದ್ದಾರೆ.
ಸತತ ಎರಡನೇ ದಿನವೂ ದೈನಂದಿನ ಅತ್ಯಧಿಕ ಸೋಂಕು ದೃಢಪಟ್ಟ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಬೆಂಗಳೂರು ನಗರದಲ್ಲಿ 1,263 ಪಾಸಿಟಿವ್ ಪ್ರಕರಣಗಳು ದಾಖಲಾಗಿವೆ. 552 ಮಂದಿ ಇಂದು ಸೋಂಕಿನಿಂದ ಮುಕ್ತವಾಗಿದ್ದಾರೆ. ಇಲ್ಲಿಯ ತನಕ ಜಿಲ್ಲೆಯಲ್ಲಿ ಕರೊನಾ ಸೋಂಕಿಗೆ ಒಟ್ಟು 88,182 ಮಂದಿ ಒಳಗಾಗಿದ್ದಾರೆ. ಇದರಲ್ಲಿ ಒಟ್ಟು 79,947 ಮಂದಿ ಗುಣವಾಗಿದ್ದಾರೆ. 7,195 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾಸರಗೋಡು ಜಿಲ್ಲೆಯ 493 ಮಂದಿಯಲ್ಲಿ ಶನಿವಾರ ಕೋವಿಡ್ ದೃಢಪಟ್ಟಿದೆ. ಉಡುಪಿ ಜಿಲ್ಲೆಯಲ್ಲಿ ಶನಿವಾರ 174 ಮಂದಿಗೆ ಕರೊನಾ ದೃಢಪಟ್ಟಿದೆ. ಇಬ್ಬರು ಮೃತರಾಗಿದ್ದಾರೆ. ಕಾರ್ಕಳದಲ್ಲಿ 57 ಮತ್ತು 63 ವರ್ಷದ ಇಬ್ಬರು ಪುರುಷರು ಸಾವನ್ನಪ್ಪಿದ್ದಾರೆ. ಸೋಂಕಿತರಲ್ಲಿ 72 ಮಂದಿ ಉಡುಪಿ, 55 ಕುಂದಾಪುರ, 44 ಮಂದಿ ಕಾರ್ಕಳ ತಾಲೂಕಿನವರಿದ್ದಾರೆ. ಮೂವರು ಹೊರ ಜಿಲ್ಲೆಯವರು. ಇವರಲ್ಲಿ 72 ಮಂದಿ ರೋಗ ಲಕ್ಷಣ ಹೊಂದಿದ್ದಾರೆ. 12 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ ಹಾಗೂ 162 ಮಂದಿ ಹೋಂ ಐಸೋಲೇಷನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 454 ಮಂದಿ ಗುಣವಾಗಿದ್ದಾರೆ. 1,885 ಸಕ್ರಿಯ ಪ್ರಕರಣಗಳಿವೆ.
ಬ್ಲ್ಯಾಕ್ ಫಂಗಸ್ ಹೊಸ ಪ್ರಕರಣಗಳಿಲ್ಲ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ ಬ್ಲ್ಯಾಕ್ ಫಂಗಸ್ ಹೊಸ ಪ್ರಕರಣ ದಾಖಲಾಗಿಲ್ಲ. ರೋಗ ಪತ್ತೆಯಾದ 39 ಮಂದಿ ಜಿಲ್ಲೆಯ ವೆನ್ಲಾಕ್ ಸರ್ಕಾರಿ ಆಸ್ಪತ್ರೆ ಹಾಗೂ ವಿವಿಧ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಡುಪಿಯಲ್ಲಿ ಕಪ್ಪು ಶಿಲೀಂಧ್ರ ರೋಗಕ್ಕೆ ಚಿಕಿತ್ಸೆ ಪಡೆಯುತ್ತಿದ್ದ ರೋಗಿಯೊಬ್ಬರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಸದ್ಯ 5 ಸಕ್ರಿಯ ಪ್ರಕರಣಗಳಿವೆ.