

ದಾವಣಗೆರೆ: ಕರೊನಾ ಸಂಕಷ್ಟದ ಈ ಸಂದರ್ಭದಲ್ಲಿ ತಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡ ಸಾಮಾಜಿಕ ಸೇವೆಗಳಿಂದ ಶಾಸಕ ಎಂ.ಪಿ. ರೇಣುಕಾಚಾರ್ಯ ಈಗಾಗಲೇ ಹಲವರ ಮೆಚ್ಚುಗೆಗೆ ಪಾತ್ರರಾಗಿ ಕಳೆದ ಕೆಲವು ದಿನಗಳಿಂದ ಗಮನ ಸೆಳೆಯುತ್ತಲೇ ಬಂದಿದ್ದಾರೆ. ಇದೀಗ ಅವರು ಮತ್ತೊಮ್ಮೆ ಜನರ ಗಮನವನ್ನು ತಮ್ಮತ್ತ ಸೆಳೆದಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಕೋವಿಡ್ ಕೇರ್ ಸೆಂಟರ್ನಲ್ಲಿ ಕರೊನಾ ಸೋಂಕಿನಿಂದ ಗುಣಮುಖರಾದವರನ್ನು ಶಾಸಕ ರೇಣುಕಾಚಾರ್ಯ ಇಂದು ಪುಷ್ಪಾರ್ಪಣೆ ಮಾಡಿ ಬೀಳ್ಕೊಟ್ಟರು. ಈ ಕೇಂದ್ರದಿಂದ ಇಂದು 25 ಮಂದಿ ಸೋಂಕುಮುಕ್ತರಾಗಿ ಬಿಡುಗಡೆ ಹೊಂದಿದ್ದಾರೆ. ಈ ಎಲ್ಲರ ಮೇಲೂ ಹೂಮಳೆಗರೆದ ರೇಣುಕಾಚಾರ್ಯ ಆಪ್ತವಾಗಿ ಬೀಳ್ಕೊಟ್ಟರು. ಇದರಿಂದ ಸಂತಸಗೊಂಡ ಸೋಂಕುಮುಕ್ತರು ಒಬ್ಬೊಬ್ಬರಾಗಿ ಶಾಸಕರ ಕಾಲಿಗೆ ನಮಸ್ಕರಿಸಿ ತೆರಳಿದರು. ಈ ವಿಡಿಯೋ ವೈರಲ್ ಆಗುತ್ತಿದ್ದು, ಜನರ ಮೆಚ್ಚುಗೆ ಪಡೆಯುತ್ತಿದೆ.