ತರಗತಿ ಪ್ರಾರಂಭಕ್ಕೆ ಮುನ್ನ ಡಿಸಿಯಿಂದ ಕಡ್ಡಾಯ ಸೂಚನೆ...!

13_11_Mdy_Dc Meeting 01
Published on

ಮಂಡ್ಯ: ಅಂತಿಮ ವರ್ಷದ ಪದವಿ ಹಾಗೂ ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳಿಗೆ ತರಗತಿ ಪ್ರಾರಂಭವಾಗುತ್ತಿರುವುದರಿಂದ ಆರೋಗ್ಯ ಇಲಾಖೆ ನೀಡಿರುವ ಮಾರ್ಗಸೂಚಿಗಳನ್ನು ತಪ್ಪದೇ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ್ ಸೂಚಿಸಿದರು.
ನ.17ರಿಂದ ತರಗತಿ ನಡೆಸಲು ಸರ್ಕಾರದ ಮಾರ್ಗಸೂಚಿಯನ್ವಯ ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಕೋವಿಡ್ ಉಸ್ತುವಾರಿ ಮತ್ತು ಸಮನ್ವಯ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿದ್ಯಾರ್ಥಿಗಳು ಪರಸ್ಪರ ಹಸ್ತಲಾಘವ ಮಾಡದಂತೆ ಎಚ್ಚರವಹಿಸಬೇಕು. ಪ್ರತಿ ಕೊಠಡಿಗೂ ಸ್ಯಾನಿಟೈಜರ್ ಸಿಂಪಡಿಸಿ ಹಾಗೂ ಪ್ರತಿ ವಿದ್ಯಾರ್ಥಿಗಳು ಆರೋಗ್ಯ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳುವಂತೆ ಅರಿವು ಮೂಡಿಸಬೇಕು. ಕಾಲೇಜಿನ ಹಂತದಲ್ಲಿ ಕೋವಿಡ್ ಬಗ್ಗೆ ಜಾಗೃತಿ ಮೂಡಿಸಲು ವಿದ್ಯಾರ್ಥಿಗಳಲ್ಲಿ 3 ತಂಡ ರಚಿಸಬೇಕು. 15 ದಿನಕ್ಕೊಮ್ಮೆ ವಿದ್ಯಾರ್ಥಿಗಳಲ್ಲಿ ಕೆಮ್ಮು, ನೆಗಡಿಯಂತಹ ಲಕ್ಷಣಗಳು ಕಂಡು ಬಂದರೆ ಪಿಪಿಟಿ ಕಿಟ್ ಧರಿಸಿ ಅವರನ್ನು ಪರೀಕ್ಷಿಸುವಂತೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್.ಡಿ.ಪ್ರಕಾಶ್, ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ದಲಿಂಗೇಶ್, ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಪುಷ್ಪಲತಾ, ಜಿಲ್ಲಾ ಲೀಡ್ ಕಾಲೇಜಿನ ಪ್ರಾಂಶುಪಾಲ ನಟರಾಜ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net