

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಎರಡನೇ ಅಲೆ ತಗ್ಗಿದರೂ ಸೋಂಕು ಪ್ರಕರಣಗಳ ಸಂಖ್ಯೆ ಸಾವಿರಕ್ಕಿಂತ ಹೆಚ್ಚಿನ ಸಂಖ್ಯೆಯೇ ವರದಿಯಾಗುತ್ತಿದೆ. ಬೆಂಗಳೂರು ನಗರದಲ್ಲಿ ಪ್ರಕರಣಗಳ ಸಂಖ್ಯೆ ಮತ್ತೆ ಏರಿಕೆಯಾಗಿದ್ದು, ಶುಕ್ರವಾರ ರಾಜ್ಯಾದ್ಯಂತ 1,301 ಸೋಂಕು ಪ್ರಕರಣಗಳು ದೃಢಪಟ್ಟಿದೆ. ಇದರೊಂದಿಗೆ ಈವರೆಗಿನ ಸೋಂಕಿತರ ಒಟ್ಟು ಸಂಖ್ಯೆ 29.44 ಲಕ್ಷ ಮೀರಿದೆ.
ಕಳೆದ 24 ಗಂಟೆಗಳಲ್ಲಿ 17 ಮಂದಿ ಸಾವಿಗೀಡಾಗಿದ್ದು, ಮೃತರ ಸಂಖ್ಯೆ 37,248ಕ್ಕೆ ಏರಿಕೆಯಾಗಿದೆ. 1,614 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಗುಣಮುಖರ ಸಂಖ್ಯೆ 28.88 ಲಕ್ಷ ದಾಟಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 18,970ಕ್ಕೆ ಇಳಿಕೆಯಾಗಿದೆ.
ರಾಜಧಾನಿ ಬೆಂಗಳೂರು ಸೋಂಕು ಪ್ರಕರಣಗಳ ಸಂಖ್ಯೆ ಮತ್ತೆ ಹೆಚ್ಚಳವಾಗಿದ್ದು, ಶುಕ್ರವಾರ 386 (2 ಸಾವು) ವರದಿಯಾಗಿದೆ. ದಕ್ಷಿಣಕನ್ನಡದಲ್ಲಿ 248 (1), ಹಾಸನ 117 (3), ಉಡುಪಿ 106 (1) ಪ್ರಕರಣಗಳು ವರದಿಯಾಗಿವೆ. ಹನ್ನೊಂದು ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಎರಡಂಕಿಗೆ ಹಾಗೂ 14 ಜಿಲ್ಲೆಗಳಲ್ಲಿ ಒಂದಂಕಿಗೆ ತಲುಪಿದೆ. ರಾಯಚೂರಿನಲ್ಲಿ ಯಾವುದೇ ಪ್ರಕರಣ ದೃಢಪಟ್ಟಿಲ್ಲ. 11 ಜಿಲ್ಲೆಗಳಲ್ಲಿ ಸಾವಿನ ಪ್ರಕರಣಗಳು ವರದಿಯಾಗಿದ್ದು, 19 ಜಿಲ್ಲೆಗಳಲ್ಲಿ ಯಾವುದೇ ಸಾವು ಸಂಭವಿಸಿಲ್ಲ.