

ಬೆಂಗಳೂರು: ರಾಜ್ಯದಲ್ಲಿ ಕೋವಿಡ್ ಸೋಂಕಿಗೆ ಮತ್ತಿಬ್ಬರು ಬಲಿಯಾಗಿದ್ದು, ಸಾವಿನ ಸಂಖ್ಯೆ 11ಕ್ಕೆ ಏರಿಕೆಯಾಗಿದೆ.
ಮಂಗಳವಾರ ಬೆಳಗಾವಿಯ 51 ವರ್ಷದ ಮಹಿಳೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ 79 ವರ್ಷದ ವೃದ್ಧ ಸಾವಿಗೀಡಾಗಿದ್ದಾರೆ. ಅಧಿಕ ರಕ್ತದೊತ್ತಡ, ಮಧುಮೇಹ, ಕಿಡ್ನಿ ಸಮಸ್ಯೆ ಹೊಂದಿದ್ದ ಮಹಿಳೆ ಕೆಮ್ಮು ಹಾಗೂ ಉಸಿರಾಟದ ಸಮಸ್ಯೆಯಿಂದ ಏಪ್ರಿಲ್ 6ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಲಿಸದೆ ಮೃತಟ್ಟಿದ್ದಾರೆ. ಅಧಿಕ ರಕ್ತದೊತ್ತಡ ಸೇರಿ ಹಲವು ಆರೋಗ್ಯ ಸಮಸ್ಯೆಯನ್ನು ಹೊಂದಿದ್ದ ವೃದ್ಧ ಸಹ ಜ್ವರ, ಕೆಮ್ಮು ಹಾಗೂ ತೀವ್ರ ಉಸಿರಾಟದ ತೊಂದರೆಯಿಂದ ಮೇ 6ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಈ ಇಬ್ಬರಿಗೂ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ವರದಿಯಲ್ಲಿ ಸೋಂಕು ದೃಢಪಟ್ಟಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
ಕಳೆದ 24 ಗಂಟೆಗಳಲ್ಲಿ 571 ಮಂದಿಯ ಗಂಟಲ ದ್ರವ ಮಾದರಿ ಪರೀಕ್ಷೆಗೆ ಒಳಪಡಿಸಲಾಗಿದ್ದು, 67 ಮಂದಿಯಲ್ಲಿ ಕೋವಿಡ್ ಸೋಂಕು ದೃಢಪಟ್ಟಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 459 ತಲುಪಿದ್ದು, ಸೋಂಕು ಪ್ರಮಾಣ ದರ ಶೇ. 11.73 ವರದಿಯಾಗಿದೆ. ಸೋಂಕಿತರಲ್ಲಿ 453 ಮಂದಿ ಮನೆ ಆರೈಕೆಯಲ್ಲಿದ್ದು, ಉಳಿದ 6 ಮಂದಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.