

ಬೆಂಗಳೂರು: ಹವಾಮಾನ ಬದಲಾವಣೆಯಿಂದ ರಾಜ್ಯದಲ್ಲಿ ಈಗಾಗಲೇ ಡೆಂಘೆ ಸೇರಿ ನಾನಾ ಸಾಂಕ್ರಾಮಿಕ ರೋಗಗಳ ಆತಂಕ ಎದುರಾಗಿರುವ ಬೆನ್ನಲ್ಲೇ 9 ತಿಂಗಳ ಮಗುವಿಗೆ ಕೋವಿಡ್ ಸೋಂಕು ದೃಢಪಟ್ಟಿರುವುದು ಭೀತಿ ಸೃಷ್ಟಿಸಿದೆ. ಏಷ್ಯಾದ ಕೆಲವು ಭಾಗಗಳಲ್ಲಿ ಕೋವಿಡ್ ಸೋಂಕು ಪ್ರಕರಣಗಳು ವ್ಯಾಪಕವಾಗಿರುವುದು ಆತಂಕಕ್ಕೆ ಕಾರಣವಾಗಿದೆ.
ಅನಾರೋಗ್ಯ ಸಮಸ್ಯೆಯಿಂದ ಕಳೆದ ಗುರುವಾರ ರಾತ್ರಿ ನಗರದ ವಾಣಿವಿಲಾಸ ಆಸ್ಪತ್ರೆಗೆ ದಾಖಲಾಗಿರುವ 9 ತಿಂಗಳ ಗಂಡು ಮಗುವಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಮಗುವಿಗೆ ಮಕ್ಕಳ ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದ್ದು, 24 ಗಂಟೆಗಳ ನಿಗಾ ವಹಿಸಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಹೊಸಕೋಟೆ ಮೂಲದ ದಂಪತಿಯ 9 ತಿಂಗಳ ಈ ಮಗು ಕಳೆದ ಹತ್ತು ದಿನಗಳಿಂದ ಶೀತ, ನೆಗಡಿ ಸಮಸ್ಯೆಯಿಂದ ಬಳಲುತ್ತಿದ್ದು, ಸ್ಥಳೀಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದಾರೆ. ಆದರೂ ಗುಣಮುಖವಾಗದೆ ವಾರದ ಹಿಂದೆ ಮೂರ್ಛೆರೋಗ ಕಾಣಿಸಿಕೊಂಡಿದೆ. ಹಾಗಾಗಿ ಅಲ್ಲಿನ ಎಂವಿಜೆ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ. ಚೇತರಿಕೆ ಕಾಣಿಸಿಕೊಳ್ಳದೆ ವಾಣಿವಿಲಾಸ ಆಸ್ಪತ್ರೆಗೆ ಕರೆ ತಂದಿದ್ದಾರೆ. ಈ ವೇಳೆ ಮಗುವನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಕೋವಿಡ್ ಸೋಂಕು ದೃಢಪಟ್ಟಿದೆ. ಮಗು ಸಹಜಸ್ಥಿತಿಯಲ್ಲಿದ್ದು ನಿಗಾದಲ್ಲಿ ಇಡಲಾಗಿದೆ. ಗುಣ ಹೊಂದಿದ ಕೂಡಲೇ ಮನೆಗೆ ಕಳುಹಿಸಲಾಗುವುದು ಎಂದು ಆಸ್ಪತ್ರೆಯ ಮಕ್ಕಳ ವಿಭಾಗದ ಮುಖ್ಯಸ್ಥೆ ಡಾ. ಸಹನ ದೇವದಾಸ್ ತಿಳಿಸಿದ್ದಾರೆ.
5 ತಿಂಗಳಲ್ಲಿ 43 ಕೇಸ್
ಹವಾಮಾನ ಬದಲಾವಣೆಯಿಂದಾಗಿ ಶೀತ ವಾತಾವರಣವಿದ್ದು, ಈ ಸಂದರ್ಭದಲ್ಲಿ ಶೀತ ಸಂಬಂಧಿ ಸಮಸ್ಯೆಗಳ ಜತೆಗೆ ಶ್ವಾಸಕೋಶ ಸಮಸ್ಯೆಗಳು ಸಹಜವಾಗಿ ಕಾಣಿಸಿಕೊಳ್ಳುತ್ತವೆ. ಅದರಂತೆ ಕಳೆದ ಎರಡು ವಾರಗಳಿಂದ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಸಂಖ್ಯೆ ಹೆಚ್ಚಾಗಿವೆ. ಜನವರಿಯಲ್ಲಿ (3), ಫೆಬ್ರವರಿಯಲ್ಲಿ (1),ಮಾರ್ಚ್ನಲ್ಲಿ (3), ಏಪ್ರಿಲ್ ನಲ್ಲಿ (3), ಪ್ರಕರಣಗಳು ವರದಿಯಾಗಿದ್ದವು. ಮೇನಲ್ಲಿ (33) ಪ್ರಕರಣಗಳು ದೃಢಪಟ್ಟಿವೆ. ಇದರೊಂದಿಗೆ ಈವರೆಗಿನ ಒಟ್ಟು ಸೋಂಕು ಪ್ರಕರಣಗಳ ಸಂಖ್ಯೆ 43ಕ್ಕೆ ಏರಿಕೆಯಾಗಿದೆ. ಆದರೆ ಎಲ್ಲವೂ ಸಹವಾಗಿದ್ದು, ಯಾವುದೇ ಹೊಸ ಅಲೆ ಕಾಣಿಸಿಕೊಂಡಿಲ್ಲ. ಆದಾಗಿಯೂ ಮುನ್ನೆಚ್ಚರಿಕೆ ಕ್ರಮವಾಗಿ ದೃಢ ಸೋಂಕು ಪ್ರಕರಣಗಳ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸಿಂಗ್ ಪರೀಕ್ಷೆಗೆ ಒಳಪಡಿಸಲಾಗುತ್ತಿದ್ದು, ಹೊಸ ತಳಿ ಕಂಡು ಬಂದಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಕೋಟ್:
ಸಿಂಗಾಪುರ, ಹಾಂಕಾಂಗ್ ದೇಶದಲ್ಲಿ ಕೋವಿಡ್ ಪ್ರಕರಣ ಹೆಚ್ಚುತ್ತಿದ್ದು, ವಿದೇಶದಿಂದ ಆಗಮಿಸುವವರ ಕೋವಿಡ್ ಪರೀಕ್ಷೆ ನಡೆಸಲು ಕೇಂದ್ರ ಸರ್ಕಾರ ಯಾವುದೇ ಕ್ರಮ ವಹಿಸದ ಕಾರಣ ಇಲ್ಲಿಯೂ ಕೋವಿಡ್ ಪ್ರಕರಣಗಳು ಹೆಚ್ಚುವ ಸಾಧ್ಯತೆಯಿದೆ. ಕೋವಿಡ್ ಪ್ರಕರಣಗಳಲ್ಲಿ ಏರಿಕೆ ಕಂಡುಬರುತ್ತಿದ್ದ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಎಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ತ್ವರಿತ ನಿರ್ಧಾರ ಮಾಡಬೇಕು.
ಸಿದ್ದರಾಮಯ್ಯ, ಮುಖ್ಯಮಂತ್ರಿ