

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಪ್ರಮಾಣ ಏರುಗತಿಯಲ್ಲಿದ್ದು, ಕಳೆದ ಎರಡು ದಿನಗಳಲ್ಲಿ ಹೊಸ ಪ್ರಕರಣಗಳ ಸಂಖ್ಯೆ ದುಪ್ಪಟ್ಟಾಗಿದೆ.
ಎಲ್ಲ ಮುನ್ನೆಚ್ಚರಿಕೆ ಕ್ರಮಗಳ ನಡುವೆಯೂ ಜಿಲ್ಲೆಯಲ್ಲಿ ಸೋಂಕು ಹರಡುವ ವೇಗ ಗಮನಿಸಿದರೆ ಇದು ಮೂರನೇ ಅಲೆಯ ಮುನ್ಸೂಚನೆ ಎಂದು ಭಾವಿಸಬಹುದು ಎಂದು ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ ಭಾನುವಾರ 63 ಮಂದಿಯಲ್ಲಿ (ಶೇ.78) ಸೋಂಕು ದೃಢಪಟ್ಟಿದ್ದು, ಚಿಕಿತ್ಸೆ ಪಡೆಯುತ್ತಿದ್ದ ಒಬ್ಬರು ಮೃತಪಟ್ಟಿದ್ದಾರೆ. 18 ಮಂದಿ ಸೋಂಕುಮುಕ್ತರಾಗಿದ್ದಾರೆ. 231 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ ಒಟ್ಟು 1,16,493 ಮಂದಿ ಸೋಂಕಿಗೊಳಗಾಗಿದ್ದು, 1,14,560 ಮಂದಿ ಗುಣವಾಗಿದ್ದಾರೆ.
ಕಂಟೇನ್ಮೆಂಟ್ ಜೋನ್ ಇಲ್ಲ: ಹೊಸ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದರೂ, ಒಂದೇ ಕಡೆ ಅಧಿಕ ಸೋಂಕಿತರು ಇರುವ ಯಾವುದೇ ಕಂಟೇನ್ಮೆಂಟ್ ಜೋನ್‌ಗಳು ಇಲ್ಲ. ಹೊಸ ವರ್ಷ ಹಾಗೂ ಕ್ರಿಸ್‌ಮಸ್ ರಜೆಯ ಮೇಲೆ ವಿವಿಧ ರಾಜ್ಯಗಳಿಗೆ ತೆರಳಿ ವಾಪಸ್ ಆಗಿರುವ ವಿದ್ಯಾರ್ಥಿಗಳು ಹಾಗೂ ಶಿಕ್ಷಣ ಸಂಸ್ಥೆಗಳ ಸಿಬ್ಬಂದಿ ಮೇಲೆ ವಿಶೇಷ ನಿಗಾ ಇರಿಸಲಾಗಿದೆ. ಹೊರ ರಾಜ್ಯಗಳಿಂದ ಆಗಮಿಸಿದ ವಿದ್ಯಾರ್ಥಿಗಳು ವಾಪಸ್ ಬರುವ ಸಂದರ್ಭ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಜತೆಗೆ ಹಾಜರಾಗಬೇಕು. ಊರಿನಿಂದ ಆಗಮಿಸಿದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಏಳು ದಿನ ಕ್ವಾರಂಟೈನ್ ಆಗಬೇಕು. ಕ್ವಾರಂಟೈನ್ ಅವಧಿ ಮುಗಿದ ಬಳಿಕ ಇನ್ನೊಮ್ಮೆ ಆರ್‌ಟಿಪಿಸಿಆರ್ ಪರೀಕ್ಷೆಗೆ ಒಳಗಾಗಿ ನೆಗೆಟಿವ್ ವರದಿ ಪಡೆದ ಬಳಿಕವಷ್ಟೇ ಸಂಸ್ಥೆಯ ಇತರರ ಜತೆ ಭಾಗವಹಿಸುವುದು ಕಡ್ಡಾಯಗೊಳಿಸಲಾಗಿದೆ ಎಂದು ಕೋವಿಡ್ ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಅಶೋಕ್ ಪ್ರತಿಕ್ರಿಯಿಸಿದ್ದಾರೆ.
ಉಡುಪಿಲ್ಲಿ 54 ಮಂದಿಗೆ ಕೋವಿಡ್:
ಉಡುಪಿ: ಜಿಲ್ಲೆಯಲ್ಲಿ ಭಾನುವಾರ 54 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಸಕ್ರಿಯ ಪ್ರಕರಣ 186ಕ್ಕೆ ಏರಿಕೆಯಾಗಿದೆ.
5777 ಮಂದಿಯನ್ನು ಪರೀಕ್ಷಿಸಲಾಗಿದ್ದು, ಪಾಸಿಟಿವಿಟಿ ದರ ಶೇ. 0.93ರಷ್ಟಿದೆ. ಸೋಂಕಿತರಲ್ಲಿ 52 ಮಂದಿ ಉಡುಪಿ, ಓರ್ವ ಕುಂದಾಪುರ, ಓರ್ವ ಕಾರ್ಕಳ ತಾಲೂಕಿನವರು. 34 ಮಂದಿ ರೋಗಲಕ್ಷಣ ಹೊಂದಿದ್ದು, ಮೂವರು ಆಸ್ಪತ್ರೆಯಲ್ಲಿ, 51 ಮಂದಿ ಹೋಂ ಐಸೋಲೇಶನ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 8 ಮಂದಿ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.
ಇಂದು ಮಕ್ಕಳಿಗೆ ಲಸಿಕೆ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 15ರಿಂದ 18 ವರ್ಷದ ಒಳಗಿನ ಮಕ್ಕಳಿಗೆ ಕೋವಿಡ್ ಲಸಿಕೆ ಕಾರ್ಯಕ್ರಮದ ಉದ್ಘಾಟನೆ ಜ.3ರಂದು ನಗರದ ರಥಬೀದಿ ಸರ್ಕಾರಿ ಪದವಿಪೂರ್ವ ಕಾಲೇಜು ಸಭಾಂಗಣದಲ್ಲಿ ಬೆಳಗ್ಗೆ 9.30ಕ್ಕೆ ನಡೆಯಲಿದೆ. ಉಡುಪಿ ಜಿಲ್ಲೆಯಲ್ಲಿ ಮಕ್ಕಳ ಕೋವಿಡ್ -19 ಲಸಿಕಾ ಅಭಿಯಾನಕ್ಕೆ ನಗರದ ತಾಂಗದಗಡಿ ನಿಟ್ಟೂರು ಪ್ರೌಢಶಾಲೆಯಲ್ಲಿ ಬೆಳಗ್ಗೆ 10 ಗಂಟೆಗೆ ಜಿಲ್ಲಾಧಿಕಾರಿ ಕೂರ್ಮಾರಾವ್ ಚಾಲನೆ ನೀಡಲಿದ್ದಾರೆ.
ಕರೊನಾ ಸೋಂಕು ಏರಿಕೆ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ದಿನಕ್ಕೆ 15 ಸಾವಿರ ಮಂದಿಯ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲು ಇಲಾಖೆ ಗುರಿ ನಿಗದಿಪಡಿಸಿದೆ. ಪ್ರಸ್ತುತ 8 ಸಾವಿರ ಪರೀಕ್ಷೆ ನಡೆಸಲಾಗುತ್ತದೆ. ಹಂತ ಹಂತವಾಗಿ ಪರೀಕ್ಷೆ ಪ್ರಮಾಣ ಹೆಚ್ಚಿಸಲಾಗುತ್ತಿದೆ.
- ಡಾ.ಕಿಶೋರ್ ಆರೋಗ್ಯ ಅಧಿಕಾರಿ. ದ.ಕ.