

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ತಿಂಗಳ ಬಳಿಕ ಕನಿಷ್ಠ ಪ್ರಕರಣ ದಾಖಲಾಗಿದೆ. ಶನಿವಾರ 154 ಜನರಲ್ಲಿ ಕರೊನಾ ದೃಢಪಟ್ಟಿದ್ದು, ಪಾಸಿಟಿವಿಟಿ ರೇಟ್ ಕೂಡ ಕನಿಷ್ಠ ಶೇ.1.74ಕ್ಕೆ ಇಳಿಕೆಯಾಗಿದೆ.
8 ಮಂದಿ ಮೃತಪಟ್ಟಿದ್ದು, ಇವರಲ್ಲಿ ನಾಲ್ವರು ಮಂಗಳೂರು ತಾಲೂಕು ನಿವಾಸಿಗಳು. ಬಂಟ್ವಾಳ ಮತ್ತು ಬೆಳ್ತಂಗಡಿಯ ತಲಾ ಓರ್ವರು ಹಾಗೂ ಹೊರ ಜಿಲ್ಲೆಯ ಇಬ್ಬರು ಒಳಗೊಂಡಿದ್ದಾರೆ. 497 ಮಂದಿ ಗುಣವಾಗಿದ್ದಾರೆ. ಜಿಲ್ಲೆಯಲ್ಲಿ 3,419 ಸಕ್ರಿಯ ಪ್ರಕರಣಗಳಿವೆ.
ಮಂಗಳೂರಿನಲ್ಲಿ 1, ಬೆಳ್ತಂಗಡಿಯಲ್ಲಿ 2 ಸಹಿತ ಜಿಲ್ಲೆಯಲ್ಲಿ 3 ಪ್ರದೇಶಗಳನ್ನು ಹೊಸ ಕಂಟೇನ್ಮೆಂಟ್ ವಲಯಗಳಾಗಿ ಘೋಷಣೆ ಮಾಡಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಭಾನುವಾರ 28 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಜಿಲ್ಲೆಯ ಪಾಸಿಟಿವಿಟಿ ಪ್ರಮಾಣ ಕಳೆದ 3 ತಿಂಗಳಲ್ಲೇ ಅತೀ ಕನಿಷ್ಠ ಶೇ.1.2ಕ್ಕೆ ಇಳಿಕೆಯಾಗಿದೆ. ಉಡುಪಿಯಲ್ಲಿ 69 ವರ್ಷದ ಪುರುಷ ಹಾಗೂ ಕುಂದಾಪುರದಲ್ಲಿ 64 ವರ್ಷದ ಪುರುಷ ಮೃತಪಟ್ಟಿದ್ದಾರೆ. ಸೋಂಕಿತರಲ್ಲಿ 10 ಮಂದಿ ಉಡುಪಿ, 10 ಕುಂದಾಪುರ, 8 ಮಂದಿ ಕಾರ್ಕಳ ತಾಲೂಕಿನವರು. 130 ಮಂದಿ ಸೋಂಕು ಮುಕ್ತರಾಗಿದ್ದು, 821 ಸಕ್ರಿಯ ಪ್ರಕರಣಗಳಿವೆ.
ಎರಡೂ ಜಿಲ್ಲೆಗಳಲ್ಲಿ ಭಾನುವಾರ ಬ್ಲ್ಯಾಕ್ ಫಂಗಸ್ ಹೊಸ ಪ್ರಕರಣಗಳು ವರದಿಯಾಗಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ 2,987 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ಬೆಳ್ತಂಗಡಿ 767, ಮಂಗಳೂರು 2,220 ಮಂದಿ ಲಸಿಕೆ ಪಡೆದುಕೊಂಡಿದ್ದಾರೆ.