

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಕರೊನಾ ಇಳಿಕೆ ಹಾದಿಯಲ್ಲಿದೆ. ಶನಿವಾರ ದ.ಕ. ಜಿಲ್ಲೆಯಲ್ಲಿ 375 ಮಂದಿಗೆ ಕೋವಿಡ್ ದೃಢಪಟ್ಟಿದ್ದು, 14 ಮಂದಿ ಮೃತಪಟ್ಟಿದ್ದಾರೆ. ಮೃತಪಟ್ಟವರಲ್ಲಿ 9 ಮಂದಿ ಜಿಲ್ಲೆಯವರು, 5 ಮಂದಿ ಹೊರ ಜಿಲ್ಲೆಯವರು. ಶನಿವಾರ 567 ಮಂದಿ ಗುಣವಾಗಿದ್ದಾರೆ. ಸದ್ಯ 6,208 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜಿಲ್ಲೆಯಲ್ಲಿ ಶೇ.4.62 ಪಾಸಿಟಿವಿಟಿ ದರ ಇದೆ.
ಮಂಗಳೂರು, ಪುತ್ತೂರು ತಾಲೂಕಿನ 2, ಸುಳ್ಯ, ಬೆಳ್ತಂಗಡಿ ತಾಲೂಕಿನ ತಲಾ 1 ಪ್ರದೇಶಗಳ ಸಹಿತ ಜಿಲ್ಲೆಯ 6 ಕಡೆ ಶನಿವಾರ ಕಂಟೇನ್ಮೆಂಟ್ ವಲಯ ಘೋಷಣೆ ಮಾಡಲಾಗಿದೆ. ಕಾಸರಗೋಡು ಜಿಲ್ಲೆಯ 577 ಮಂದಿಗೆ ಶನಿವಾರ ಕೋವಿಡ್ ಬಾಧಿಸಿದೆ.
ಉಡುಪಿ ಜಿಲ್ಲೆಯಲ್ಲಿ ಶನಿವಾರ 136 ಮಂದಿಗೆ ಕೋವಿಡ್ ದೃಢಪಟ್ಟಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಕುಂದಾಪುರದಲ್ಲಿ 75 ವರ್ಷದ ಮಹಿಳೆ ಹಾಗೂ 40 ವರ್ಷದ ಪುರುಷ ಮೃತಪಟ್ಟವರು. ಸೋಂಕಿತರಲ್ಲಿ 75 ಉಡುಪಿ, 34 ಕುಂದಾಪುರ, 30 ಮಂದಿ ಕಾರ್ಕಳದವರು. 268 ಮಂದಿ ಡಿಸ್ಚಾರ್ಜ್ ಆಗಿದ್ದು, 1129 ಸಕ್ರಿಯ ಪ್ರಕರಣಗಳಿವೆ. ಜಿಲ್ಲೆಯಲ್ಲಿ ಶೇ.4.6 ಪಾಸಿಟಿವಿಟಿ ರೇಟ್ ಇದೆ.
ಮತ್ತೊಬ್ಬರಿಗೆ ಬ್ಲಾೃಕ್ ಫಂಗಸ್: ದ.ಕ. ಜಿಲ್ಲೆಯಲ್ಲಿ ಶನಿವಾರ ಹೊರ ಜಿಲ್ಲೆಯ ಒಬ್ಬರಲ್ಲಿ ಬ್ಲ್ಯಾಕ್ ಫಂಗಸ್ ಪತ್ತೆಯಾಗಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 29ಕ್ಕೆ (20 ಮಂದಿ ಹೊರ ಜಿಲ್ಲೆಯವರು) ತಲುಪಿದೆ. ಇದುವರೆಗೆ 35 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 18 ಮಂದಿ (14 ಮಂದಿ ಹೊರ ಜಿಲ್ಲೆಯವರು) ಮೃತಪಟ್ಟಿದ್ದಾರೆ.
ಕಾಲೇಜು ವಿದ್ಯಾರ್ಥಿಗಳು, ಸಿಬ್ಬಂದಿಗೆ ನಾಳೆಯಿಂದ ಲಸಿಕೆ: ಮಂಗಳೂರು: ಮುಂದಿನ ತಿಂಗಳಿಂದ ಕಾಲೇಜು ಪ್ರಾರಂಭಿಸಲು ಉದ್ದೇಶಿಸಿದ್ದು, ಅದಕ್ಕೂ ಮೊದಲು ಪದವಿ ವಿದ್ಯಾರ್ಥಿಗಳು, ಬೋಧಕ ಸಿಬ್ಬಂದಿ, ಬೋಧಕೇತರ ಸಿಬ್ಬಂದಿಗೆ ಕೋವಿಡ್ ಲಸಿಕೆ ನೀಡಲು ನಿರ್ಧರಿಸಲಾಗಿದೆ.
ಜೂನ್ 28ರಿಂದ ಮೊದಲ್ಗೊಂಡು ಮುಂದಿನ 15 ದಿನ ಲಸಿಕೆಯ ಲಭ್ಯತೆಗೆ ಅನುಗುಣವಾಗಿ ಜಿಲ್ಲೆಯ ಎಲ್ಲ ಪದವಿ/ಡಿಪ್ಲೋಮಾ, ಐಟಿಐ, ಇಂಜಿನಿಯರಿಂಗ್, ಪ್ಯಾರಾ ಮೆಡಿಕಲ್ ಇತ್ಯಾದಿ ಸಂಸ್ಥೆಗಳ 18 ವರ್ಷ ಮೇಲ್ಪಟ್ಟ ಎಲ್ಲ ವಿದ್ಯಾರ್ಥಿ, ಬೋಧಕ, ಬೋಧಕೇತರ ಸಿಬ್ಬಂದಿಗೆ ಲಸಿಕೆ ಶಿಬಿರ ನಡೆಸಲಾಗುವುದು.
ಅಲ್ಲದೆ 28ರಂದು ಜಿಲ್ಲೆಯ ಎಲ್ಲ ನಗರ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ ಹಾಗೂ ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಲಸಿಕಾ ಶಿಬಿರ ನಡೆಯಲಿದೆ. ಜಿಲ್ಲೆಯಲ್ಲಿ ಶನಿವಾರ 8,662 ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ.