ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಳ

Covid
Published on

ಮಂಗಳೂರು/ಉಡುಪಿ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ 486 ಕರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಮೂವರು ಮೃತಪಟ್ಟಿದ್ದಾರೆ. 225 ಮಂದಿ ಗುಣಮುಖವಾಗಿದ್ದು, ಅಧಿಕ ಪಾಸಿಟಿವ್ ಪ್ರಕರಣಗಳು ಪತ್ತೆಯಾದ ನಾಲ್ಕು ಪ್ರದೇಶಗಳನ್ನು ಕಂಟೇನ್ಮೆಂಟ್ ವಲಯಗಳೆಂದು ಇಲಾಖೆ ಗುರುತಿಸಿದೆ.

ಆರು ಮಂದಿಯಲ್ಲಿ ಪಾಸಿಟಿವ್ ಪತ್ತೆಯಾದ ಕೊಣಾಜೆಯ ಒಂದು ಮನೆ, ಒಟ್ಟು ಎಂಟು ಮಂದಿಯಲ್ಲಿ ಪಾಸಿಟಿವ್ ಪತ್ತೆಯಾದ ನಿಡ್ಡೋಡಿಯ ಎರಡು ಮನೆಗಳು, ಆಸುಪಾಸಿನಲ್ಲಿ 16 ಪಾಸಿಟಿವ್ ಪತ್ತೆಯಾದ ಕಲ್ಲಮಂಡ್ಕೂರು ಪ್ರದೇಶ, ಐದು ಪಾಸಿಟಿವ್ ಪ್ರಕರಣಗಳು ಪತ್ತೆಯಾದ ಮಂಚಿಯ ಒಂದು ಮನೆಯನ್ನು ಕಂಟೇನ್ಮೆಂಟ್ ಜೋನ್‌ಗಳೆಂದು ಗುರುತಿಸಲಾಗಿದೆ.

ಕರೊನಾ ಸೋಂಕಿಗೆ ಒಳಗಾಗಿ ಮೃತಪಟ್ಟ ಮೂವರಲ್ಲಿ ಓರ್ವರು ಕ್ಯಾನ್ಸರ್ ರೋಗಿಯಾಗಿದ್ದು, ಇತರ ಇಬ್ಬರು ರಕ್ತದೊತ್ತಡ, ಸಕ್ಕರೆ ಕಾಯಿಲೆ ಮುಂತಾದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದರು.

ಕಾಸರಗೋಡಲ್ಲಿ 906: ಜಿಲ್ಲೆಯ 906 ಮಂದಿ ಸಹಿತ ಕೇರಳದಲ್ಲಿ ಮಂಗಳವಾರ 32,819 ಮಂದಿಗೆ ಕೋವಿಡ್-19 ಬಾಧಿಸಿದೆ. 32 ಮಂದಿ ಕೋವಿಡ್‌ನಿಂದ ಸಾವಿಗೀಡಾಗಿದ್ದು, ಇದುವರೆಗೆ ಸೋಂಕಿಗೆ ಬಲಿಯಾದವರ ಸಂಖ್ಯೆ 5,170ಕ್ಕೇರಿದೆ.

ಉಡುಪಿ 477 ಕೇಸ್: ಉಡುಪಿ: ಜಿಲ್ಲೆಯಲ್ಲಿ ಮಂಗಳವಾರ 477 ಮಂದಿಗೆ ಕರೊನಾ ದೃಢಪಟ್ಟಿದ್ದು, ಸಕ್ರಿಯ ಪ್ರಕರಣ 1892ಕ್ಕೆ ಏರಿಕೆಯಾಗಿದೆ. ಸೋಂಕಿತರಲ್ಲಿ 263 ಉಡುಪಿ, 128 ಕುಂದಾಪುರ, 82 ಮಂದಿ ಕಾರ್ಕಳ ತಾಲೂಕಿನವರು. 4 ಮಂದಿ ಹೊರ ಜಿಲ್ಲೆಯವರು. 272 ಮಂದಿ ಗುಣಮುಖರಾಗಿದ್ದಾರೆ. ಬ್ರಹ್ಮಾವರ ತಾಲೂಕಿನ ಕೋಟತಟ್ಟು ಗ್ರಾಮದ ಅಶ್ರಿತ್ ನರ್ಸಿಂಗ್ ಕಾಲೇಜು ಹಾಸ್ಟೆಲ್ನಲ್ಲಿ 8ವಿದ್ಯಾರ್ಥಿಗಳಿಗೆ ಕೋವಿಡ್ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ 100 ಮೀ. ವ್ಯಾಪ್ತಿಯಲ್ಲಿ ಕಂಟೇನ್ಮೆಂಟ್ ವಲಯ ಘೋಷಿಸಲಾಗಿದೆ.

ಏಳು ತಿಂಗಳ ಗರ್ಭಿಣಿ ವೈದ್ಯೆ ಕೋವಿಡ್‌ಗೆ ಬಲಿ
ಮಂಗಳೂರು/ಕಾಸರಗೋಡು: ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 2 ವರ್ಷ ಕಾಲ ಕೆಲಸ ಮಾಡಿದ್ದ, ಪ್ರಸ್ತುತ 7 ತಿಂಗಳ ಗರ್ಭಿಣಿಯಾಗಿದ್ದ ವೈದ್ಯೆಯೊಬ್ಬರು ಸೋಮವಾರ ರಾತ್ರಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಕೋವಿಡ್‌ನಿಂದ ಮೃತಪಟ್ಟಿದ್ದಾರೆ.

ಕೇರಳದ ಕಾಸರಗೋಡು ಜಿಲ್ಲೆಯ ಮೇಲ್ಪರಂಬ ನಿವಾಸಿಯಾಗಿದ್ದ ವೈದ್ಯೆ ಎಂಬಿಬಿಎಸ್ ಮುಗಿಸಿ ಮಂಗಳೂರಿನ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಎರಡು ತಿಂಗಳ ಹಿಂದೆ ರಾಜೀನಾಮೆ ನೀಡಿ ಊರಿಗೆ ಹೋಗಿದ್ದರು. ಅಲ್ಲಿ ಅವರ ಕುಟುಂಬದವರಿಗೆ ಕೋವಿಡ್ ಸೋಂಕು ತಗುಲಿದ್ದು, ಅವರಿಗೂ ತಗಲಿರುವ ಸಾಧ್ಯತೆ ಇದೆ. ಆರೋಗ್ಯದಲ್ಲಿ ಸಮಸ್ಯೆ ಉಂಟಾದ ಹಿನ್ನೆಲೆಯಲ್ಲಿ ಮಂಗಳೂರಿನ ಆಸ್ಪತ್ರೆಗೆ 10 ದಿನಗಳ ಹಿಂದೆ ದಾಖಲಿಸಲಾಗಿತ್ತು. ಸೋಮವಾರ ರಾತ್ರಿ ದೇಹದ ಆಕ್ಸಿಜನ್ ಮಟ್ಟದಲ್ಲಿ ಏರುಪೇರು ಉಂಟಾಗಿದ್ದು ಮೃತರಾಗಿದ್ದಾರೆ. ಮಗುವನ್ನು ಶಸ್ತ್ರಚಿಕಿತ್ಸೆ ಮೂಲಕ ಹೊರತೆಗೆದರೂ ಜೀವ ಉಳಿಸಲಾಗಲಿಲ್ಲ. ಅವರ ಪತಿಯೂ ವೈದ್ಯರಾಗಿದ್ದು, ಇಬ್ಬರೂ ಎಂಬಿಬಿಎಸ್ ಪೂರೈಸಿ ಜತೆಯಾಗಿ ಎಂ.ಡಿ. ಅಧ್ಯಯನ ನಡೆಸುತ್ತಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net