

ಮಂಗಳೂರು: ರೈಲ್ವೇ ಇಲಾಖೆ ರೂಪಿಸಿದ ಕೋವಿಡ್ ಐಸೊಲೇಷನ್ ಕೋಚ್(ಕೋವಿಡ್ ಕೇರ್ ಕೋಚ್)ಗಳಿಗೆ ರಾಜ್ಯ ಹಾಗೂ ಕೇರಳದಲ್ಲಿ ನಿರೀಕ್ಷಿತ ಬೇಡಿಕೆ ವ್ಯಕ್ತವಾಗಿಲ್ಲ.
ರಾಜ್ಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕರೊನಾ ಸೋಂಕಿತರ ಸಂಖ್ಯೆ ಏರಿಕೆಯಾಗದ ಕಾರಣ ಕೇರಳದ ಕೆಲವೆಡೆ ಕೋವಿಡ್ ಐಸೊಲೇಷನ್ ಬೋಗಿಗಳನ್ನು ರದ್ದು ಮಾಡಿ ಅವುಗಳನ್ನು ವಿಶೇಷ ರೈಲು ಅಥವಾ ಶ್ರಮಿಕ ರೈಲುಗಳಿಗೆ ಸೇರ್ಪಡೆ ಮಾಡಲಾಗಿದೆ. ಮಂಗಳೂರಿನಲ್ಲಿ 20 ಐಸೊಲೇಷನ್ ಬೋಗಿಗಳಿದ್ದು, ಅವುಗಳನ್ನು ಕೆಲ ದಿನಗಳ ಹಿಂದೆ ಕಾರ್ಮಿಕರ ಸಾಗಾಟಕ್ಕಾಗಿ ಶ್ರಮಿಕ್ ಎಕ್ಸ್‌ಪ್ರೆಸ್ ರೈಲುಗಳಿಗೆ ಬಳಸಿಕೊಳ್ಳಲಾಗಿತ್ತು. ಒಂದು ವೇಳೆ ಅಗತ್ಯವಿದ್ದರೆ ಎಂಬ ಕಾರಣಕ್ಕಾಗಿ ಅದರಲ್ಲಿ ಹದಿನಾರನ್ನು ಮತ್ತೆ ಹಿಂದೆ ಕಳುಹಿಸಲಾಗಿದ್ದು ಪ್ರಸ್ತುತ ಅವುಗಳನ್ನು ಮಂಗಳೂರು ರೈಲ್ವೇ ಯಾರ್ಡಿನಲ್ಲಿ ಇರಿಸಿಕೊಳ್ಳಲಾಗಿದೆ.
ರಾಜ್ಯಗಳು ಕೋವಿಡ್ ಕೇರ್ ಕೋಚ್ ಅಗತ್ಯವಿದ್ದರೆ ಬೇಡಿಕೆ ಇರಿಸುತ್ತಾರೆ, ಆಗ ನಾವು ಅವರಿಗೆ ಅದನ್ನು ಹಸ್ತಾಂತರಿಸುತ್ತೇವೆ. ಆದರೆ ನಮ್ಮ ಭಾಗಗಳಲ್ಲಿ ಬೇಡಿಕೆ ಬಂದಿಲ್ಲ. ಆದರೆ ಶ್ರಮಿಕರನ್ನು ಸಾಗಿಸುವುದಕ್ಕೆ ಬಹಳ ಒತ್ತಡವಿದ್ದುದರಿಂದ ಈ ಕೋಚ್‌ಗಳನ್ನು ಅದಕ್ಕೆ ಬಳಸಿಕೊಳ್ಳಲಾಗಿದೆ. ತಿರುವನಂತಪುರಂನಲ್ಲಿ ಕೋಚ್‌ಗಳನ್ನು ಶ್ರಮಿಕ್ ಎಕ್ಸ್‌ಪ್ರೆಸ್ ಹಾಗೂ ಇತರ ವಿಶೇಷ ರೈಲುಗಳಿಗೆ ಅಳವಡಿಸಲಾಗಿದೆ ಎಂದು ದಕ್ಷಿಣ ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.