ಮೈಸೂರಿನಲ್ಲಿ ಮತ್ತೆ ಕೋವಿಡ್ ಕೇರ್ ಸೆಂಟರ್ ಆರಂಭ

Covid
Published on

* ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಕಾರಣ ಜಿಲ್ಲಾಡಳಿತ ಕ್ರಮ

ಮೈಸೂರು: ಜಿಲ್ಲೆಯಲ್ಲಿ ಕೋವಿಡ್-19ನ ಎರಡನೇ ಅಲೆ ಶುರುವಾಗಿದ್ದು, ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಜಿಲ್ಲಾಡಳಿತ ಮತ್ತೆ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಿದೆ.

ಜಿಲ್ಲಾಡಳಿತ ಸಕಲ ಪ್ರಯತ್ನ ಮಾಡುತ್ತಿದ್ದರೂ ಕೋವಿಡ್ ಪ್ರಕರಣಗಳು ಪ್ರತಿದಿನ ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸೋಂಕಿತರಿಗೆ ಹಾಸಿಗೆಗಳ ಕೊರತೆ ಉಂಟಾಗಬಾರದು ಎಂಬ ಮುಂದಾಲೋಚನೆಯಿಂದ ನಗರ ಹೊರವಲಯದ ಮಂಡಕಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕಾಡೆಮಿಕ್ ಭವನವನ್ನು ಜಿಲ್ಲಾಡಳಿತ ಮತ್ತೆ ಗುರುವಾರದಿಂದ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಿದೆ.

ಜನವರಿ ಎರಡನೇ ವಾರದವರೆಗೂ ಸದರಿ ಅಕಾಡೆಮಿಕ್ ಭವನದಲ್ಲಿ ಕೋವಿಡ್ ಕೇರ್ ಸೆಂಟರ್ ಕಾರ್ಯನಿರ್ವಹಿಸಿತ್ತು. ಬಳಿಕ ಸೋಂಕಿತರ ಸಂಖ್ಯೆ ಇಳಿಕೆಯಾದ ಕಾರಣ ಮುಚ್ಚಲಾಗಿತ್ತು. ಈಗ ಮತ್ತೆ ಆರಂಭವಾಗಿದೆ. ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 50 ಸೋಂಕಿತರನ್ನು ಗುರುವಾರ ಸದರಿ ಕೇಂದ್ರಕ್ಕೆ ವರ್ಗಾಹಿಸಲಾಗಿದೆ.

ಈ ಕೇಂದ್ರದಲ್ಲಿ ಸೋಂಕಿನ ಲಕ್ಷಣ ಇಲ್ಲದ ವ್ಯಕ್ತಿಗಳನ್ನು ದಾಖಲಿಸಿಕೊಳ್ಳಲು ಚಿಂತಿಸಲಾಗಿದೆ. ರುಚಿಯಾದ ಊಟೋಪಚಾರ, ಮನರಂಜನಾ ವ್ಯವಸ್ಥೆ ಮುಂತಾದ ಸೌಲಭ್ಯಗಳ ಜತೆಗೆ ಚಿಕಿತ್ಸೆ ನೀಡಲು ಹಾಗೂ ಇಲ್ಲಿ ದಾಖಲಾದ ವ್ಯಕ್ತಿಗಳು ಆರಾಮದಾಯಕವಾಗಿ ಚೇತರಿಸಿಕೊಳ್ಳುವಂತೆ ನೋಡಿಕೊಳ್ಳಲು ಜಿಲ್ಲಾಡಳಿತ ಚಿಂತಿಸಿದೆ.

ಅಕಾಡೆಮಿಕ್ ಭವನದಲ್ಲಿ 53 ಸಭಾಂಗಣಗಳಿದ್ದು, ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಎರಡು ಮೀಟರ್ ಅಂತರದಲ್ಲಿ ಒಂದೊಂದರಲ್ಲಿ 15 ರಿಂದ 20 ಹಾಸಿಗೆಗಳನ್ನು ವ್ಯವಸ್ಥೆ ಮಾಡಲಾಗಿದೆ. ಹಾಸಿಗೆ, ಹೊದಿಕೆ, ತಲೆದಿಂಬು, ಸ್ನಾನದ ಕೊಠಡಿ, ಶೌಚಗೃಹ, ಬಟ್ಟೆ ಸ್ವಚ್ಛಗೊಳಿಸಲು ಅಗತ್ಯ ವ್ಯವಸ್ಥೆ ಎಲ್ಲವನ್ನೂ ಮಾಡಲಾಗಿದೆ. ಸ್ನಾನಕ್ಕೆ ಬಿಸಿ ನೀರಿನ ವ್ಯವಸ್ಥೆ ಸೇರಿ ಎಲ್ಲ ಮೂಲಸೌಕರ್ಯಗಳನ್ನೂ ಒದಗಿಸಲಾಗಿದೆ. ನೋಡಲ್ ಅಧಿಕಾರಿಯಾಗಿ ಜಿಲ್ಲಾಧಿಕಾರಿ ಕಚೇರಿಯ ತಹಸೀಲ್ದಾರ್ ಡಾ.ಅಶೋಕ್ ಅವರನ್ನು ನೇಮಕ ಮಾಡಲಾಗಿದೆ.

ಕರೊನಾ ಸೋಂಕಿಗೆ ಒಳಗಾಗಿ ದಾಖಲಾದ ವ್ಯಕ್ತಿಗಳಲ್ಲಿ ಏಕತಾನತೆ, ಬೇಸರ ಉಂಟಾಗಬಹುದು. ಈ ಹಿನ್ನೆಲೆಯಲ್ಲಿ ಮನರಂಜನೆ ಗಾಗಿ ಅಗತ್ಯವಿರುವ ಪೂರಕ ವಾತಾವರಣವನ್ನು ಕೇಂದ್ರದಲ್ಲಿ ಕಲ್ಪಿಸಲಾಗಿದೆ. ಕೇರಂ ಬೋರ್ಡ್, ಚೆಸ್ ಹಾಗೂ ಬ್ಯಾಡ್ಮಿಂಟನ್ ಆಟ ಆಡಲು ವ್ಯವಸ್ಥೆ ಕಲ್ಪಿಸಲಾಗಿದೆ. ಟಿವಿ, ವೈ-ಫೈ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಕೆಳ ಮಹಡಿಯಲ್ಲಿ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ಇದಕ್ಕೆ ಗ್ರೀನ್‌ಜೋನ್ ಎಂದು ಹೆಸರಿಡಲಾಗಿದೆ. ಇಲ್ಲಿ ವೈದ್ಯರು, ಸ್ಟಾಫ್‌ನರ್ಸ್ ಹಾಗೂ ಆಡಳಿತ ಸಿಬ್ಬಂದಿ ಇರುತ್ತಾರೆ. ಮೂರನೇ ಮಹಡಿಯ ಕೊಠಡಿಗಳನ್ನು ಮಹಿಳೆಯರಿಗೆ ಹಾಗೂ ಒಂದೇ ಕುಟುಂಬದ ಸದಸ್ಯರಿಗೆ ಮೀಸಲಿಡಲಾಗಿದೆ. ಇಲ್ಲಿ ಕರೊನಾ ಸೇನಾನಿಗಳಿಗೂ ಪ್ರತ್ಯೇಕವಾದ ಕೊಠಡಿಗಳನ್ನು ಕಾಯ್ದಿರಿಸಲಾಗಿದೆ.

ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರ ಆದೇಶದಂತೆ ನಗರ ಹೊರವಲಯದ ಮಂಡಕಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾಲಯದ ಅಕಾಡೆಮಿಕ್ ಭವನವನ್ನು ಮತ್ತೆ ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲಾಗಿದ್ದು, ಗುರುವಾರ 50 ಸೋಂಕಿತರನ್ನು ದಾಖಲು ಮಾಡಲಾಗಿದೆ. ಸೋಂಕಿತರ ಅನುಕೂಲಕ್ಕಾಗಿ ಎಲ್ಲ ವ್ಯವಸ್ಥೆ ಮಾಡಲಾಗಿದೆ.

ಡಾ.ಅಶೋಕ್, ನೋಡಲ್ ಅಧಿಕಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net