

ಐನಾಪುರ: ಮಕರ ಸಂಕ್ರಮಣದಿಂದ ಐದುದಿನಗಳ ವರೆಗೆ ಜರುಗಲಿರುವ ಶ್ರೀ ಸಿದ್ಧೇಶ್ವರ ಜಾತ್ರಾ ಮಹೋತ್ಸವದಲ್ಲಿ ಕೋವಿಡ್ ಮಾರ್ಗಸೂಚಿಯಂತೆ ಸಕಲ ಸಿದ್ದತೆ ಕೈಗೊಳ್ಳಬೇಕೆಂದು ತಹಸೀಲ್ದಾರ್ ರಾಜೇಶ ಬುರ್ಲಿ ಹೇಳಿದರು.
ಪಟ್ಟಣದ ಶ್ರೀ ಸಿದ್ಧೇಶ್ವರ ದೇವಸ್ಥಾನದ ಆವರಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿ, ಅಗತ್ಯವಿರುವ ಕಡೆ ಬ್ಯಾರಿಕೇಡ್‌ಅಳವಡಿಕೆ, ವಾಹನ ನಿಲುಗಡೆ, ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರು ಮತ್ತು ಔಷಧೋಪಚಾರ ವ್ಯವಸ್ಥೆ ಕಲ್ಪಿಸಬೇಕು. ಶರ್ಯತ್ತುಗಳಲ್ಲಿ ಪ್ರಾಣಿಗಳಿಗೆ ಹಿಂಸೆ ಆಗದಂತೆ ಕ್ರಮ ಕೈಗೊಳ್ಳಬೇಕು. ಜಾತ್ರೆಯಲ್ಲಿ ವಿಡಿಯೋ ಚಿತ್ರಿಕರಣ ಮಾಡುವಂತೆ ತಿಳಿಸಿದರು.
ಪಿಎಸ್‌ಐ ಎಂ.ಬಿ. ಬಿರಾದಾರ ಮಾತನಾಡಿ, ಜಾತ್ರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ನಿರೀಕ್ಷೆ ಇದೆ. ಪ್ರತಿಯೊಬ್ಬರು ಮಾಸ್ಕ್ ಧರಿಸುವ ಮೂಲಕ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಪಟ್ಟಣ ಪಂಚಾಯಿತಿ ಡಂಗುರ ಸಾರಬೇಕು. ಜಾತ್ರಾ ಸ್ಥಳದಲ್ಲಿ ಸಾಂಕ್ರಾಮಿಕ ರೋಗಗಳು ಹರಡದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ಜಾತ್ರಾ ಪ್ರದೇಶದಲ್ಲಿ ನಿರಂತರ ದೀಪಗಳು, ಅಲ್ಲಲ್ಲಿ ಸಿಸಿ ಟಿವಿ ಅಳವಡಿಕೆಗೆ ಜಾತ್ರಾ ಕಮಿಟಿ ಕ್ರಮ ವಹಿಸಬೇಕು ಎಂದರು.
ಜಾತ್ರಾ ಕಮಿಟಿ ಉಪಾಧ್ಯಕ್ಷ ರಾಜುಗೌಡ ಪಾಟೀಲ ಮಾತನಾಡಿ, ಜಾತ್ರೆ ಯಶಸ್ಸಿಗೆ ಸಾರ್ವಜನಿಕರು ಮತ್ತು ಅಧಿಕಾರಿಗಳ ಸಹಕಾರ ಅಗತ್ಯ ಎಂದರು.
ಪಂ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ, ಗ್ರಾಮ ಲೆಕ್ಕಿಗ ಪ್ರಕಾಶ ಪುಠಾಣಿ, ಡಾ.ಅಭಿನಂದನ ಪಾಟೀಲ, ಜಾತ್ರಾ ಕಮಿಟಿ ಅಧ್ಯಕ್ಷ ಸುಭಾಷ ಪಾಟೀಲ, ಉಪಾಧ್ಯಕ್ಷ ರಾಜುಗೌಡ ಪಾಟೀಲ, ಪಟ್ಟಣ ಪಂಚಾಯಿತಿ ಸದಸ್ಯರಾದ ಅರುಣ ಗಾಣಿಗೇರ, ಸಂಜಯ ಬಿರಡಿ. ಮುಖಂಡರಾದ ದಾದಾ ಪಾಟೀಲ, ರಾಜೇಂದ್ರ ಪೋತದಾರ, ಬಾಹುಬಲಿ ಕುಸನಾಳೆ, ದಾದಾ ಜಂತೆನ್ನವರ, ಹರ್ಷವರ್ದನ ಪಾಟೀಲ, ಅಮಗೌಡ ವಡೆಯರ, ಸುರೇಶ ಅಡಿಸೇರಿ, ಸೋಮಲಿಂಗ ವಡಿಯರ ಇತರರು ಇದ್ದರು.