ಕೋವಿಡ್ -19 ಯಶಸ್ವಿ ನಿರ್ವಹಣೆಗೆ ಪ್ರಶಸ್ತಿ

covid
Published on

ಭರತ್ ಶೆಟ್ಟಿಗಾರ್ ಮಂಗಳೂರು

ಕೋವಿಡ್ ಎರಡನೇ ಅಲೆ ಗ್ರಾಮ ಮಟ್ಟದಲ್ಲಿ ವ್ಯಾಪಕವಾಗಿದ್ದು, ಆಯಾ ಗ್ರಾಮ ಪಂಚಾಯಿತಿಗಳು ಟಾಸ್ಕ್‌ಫೋರ್ಸ್‌ಗಳ ಮೂಲಕ ಪರಿಸ್ಥಿತಿ ನಿಭಾಯಿಸಲು ಪ್ರಯತ್ನಿಸುತ್ತಿವೆ.

ಗ್ರಾಮ ಮಟ್ಟದಲ್ಲಿ ಈ ಕೆಲಸಕ್ಕೆ ಇನ್ನಷ್ಟು ಚುರುಕು ಮುಟ್ಟಿಸಲು ಗ್ರಾಮೀಣಾಭಿವೃದ್ಧಿ ಪಂಚಾಯತ್‌ರಾಜ್ ಇಲಾಖೆಯೂ ಮುಂದಾಗಿದೆ. ಉತ್ತಮವಾಗಿ ಕರೊನಾ ನಿರ್ವಹಣೆ ಮಾಡಿ, ಗ್ರಾಮವನ್ನು ಸೋಂಕು ಮುಕ್ತವಾಗಿಸುವ ಒಂದು ಪಂಚಾಯಿತಿಗೆ ತಾಲೂಕು ಮಟ್ಟದಲ್ಲಿ ಪ್ರಶಸ್ತಿ ನೀಡಲು ನಿರ್ಧರಿಸಲಾಗಿದೆ. ಗ್ರಾಮ ಪಂಚಾಯಿತಿಗಳು ಇದನ್ನು ಸವಾಲಾಗಿ ಸ್ವೀಕರಿಸಿ ತಮ್ಮ ವ್ಯಾಪ್ತಿಯಲ್ಲಿ ಸೋಂಕಿನ ಪ್ರಮಾಣ ಕಡಿಮೆ ಮಾಡಲು ಪ್ರಯತ್ನಿಸುವುದರೊಂದಿಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನೂ ಪರಿಣಾಮಕಾರಿಯಾಗಿ ಮಾಡಲು ಸಾಧ್ಯವಾಗಲಿದೆ. ಪ್ರಶಸ್ತಿಗೆ ಆಯ್ಕೆಯಾಗುವ ಗ್ರಾಪಂ ವ್ಯಾಪ್ತಿಯ ಮೂವರು ಗ್ರಾಮ ಸೇವಕರಿಗೂ ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಗುತ್ತದೆ.

ಗ್ರಾಮೀಣ ಭಾಗದ ಕಾರ್ಯಪಡೆಗಳು ಕರೊನಾ ಅರಿವು ಮೂಡಿಸುವುದು, ಮಾಸ್ಕ್, ಸ್ಯಾನಿಟೈಸರ್ ವಿತರಣೆ, ಔಷಧ ಹಾಗೂ ಆಹಾರ ಕಿಟ್‌ಗಳ ವಿತರಣೆ, ಕ್ವಾರಂಟೈನ್ ಕೇಂದ್ರಗಳ ನಿರ್ವಹಣೆ, ನಗರದಿಂದ ವಲಸೆ ಬಂದವರಿಗೆ ಉದ್ಯೋಗ ಒದಗಿಸುವಲ್ಲಿ ಕೆಲಸ ಮಾಡಬೇಕು. ಪ್ರತಿಯೊಬ್ಬರಿಗೂ ವ್ಯಾಕ್ಸಿನ್ ಸಿಗುವಂತೆ ನೋಡಿಕೊಳ್ಳುವುದು ಪ್ರಮುಖ ಜವಾಬ್ದಾರಿ. ಗ್ರಾಮ ಮಟ್ಟದಲ್ಲಿ ಸರ್ಕಾರದ ಮಾರ್ಗಸೂಚಿ ಪಾಲನೆಯಾಗಿ, ಜನ ಸುರಕ್ಷಿತವಾಗಿರುವಂತೆ ನೋಡಿಕೊಂಡು ಕೋವಿಡ್ ಪ್ರಕರಣ ಕಡಿಮೆ ಮಾಡುವುದನ್ನು ಪರಿಗಣಿಸಿ ಪ್ರಶಸ್ತಿಗೆ ಆರಿಸಲಾಗುತ್ತದೆ.

ಮೈಸೂರಿನಲ್ಲಿ ವಿಶೇಷ ಘೋಷಣೆ

ಮೈಸೂರು ಜಿಲ್ಲಾಡಳಿತ ವಿಶೇಷ ಘೋಷಣೆ ಮಾಡಿದ್ದು, ಜೂನ್ 1ರಿಂದ 25ರವರಗೆ ಯಾವ ವಾರ್ಡ್, ಗ್ರಾಪಂ, ಪ್ರಾಥಮಿಕ ಆರೋಗ್ಯ ಕೇಂದ್ರ ಕೋವಿಡ್ ಮುಕ್ತವಾಗುವುದೋ, ಅವುಗಳಿಗೆ ಪ್ರಶಸ್ತಿ ನೀಡಲಿದೆ. ಪ್ರತಿ ತಾಲೂಕಿನಿಂದ ಈ ಆಯ್ಕೆ ನಡೆಯಲಿದ್ದು, ಆರೋಗ್ಯಾಧಿಕಾರಿ, ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಪಿಡಿಒ, ಕಾರ್ಯದರ್ಶಿಯನ್ನು ಜುಲೈ 1ರ ವೈದ್ಯರ ದಿನಾಚರಣೆಯಂದು ಗೌರವಿಸಲಿದೆ. ಇದು ಇತರ ಜಿಲ್ಲಾಡಳಿತಗಳಿಗೂ ಮಾದರಿಯಾಗಿದ್ದು, ಇದರಿಂದ ಕೋವಿಡ್ ನಿಯಂತ್ರಣಕ್ಕೆ ವೇಗ ದೊರೆಯಲಿದೆ.

ಗ್ರಾಮೀಣ ಭಾಗದಲ್ಲಿ ಕರೊನಾ ಹಾವಳಿ ಹೆಚ್ಚಾಗಿದೆ. ಸೋಂಕು ನಿಯಂತ್ರಿಸಲು ಗ್ರಾಪಂ ವ್ಯಾಪ್ತಿಯಲ್ಲಿ ಟಾಸ್ಕ್‌ಫೋರ್ಸ್ ರಚಿಸಲಾಗಿದ್ದು, ಬಹುತೇಕ ಕಡೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಕರೊನಾ ನಿರ್ವಹಣೆಯಲ್ಲಿ ಪ್ರತಿ ತಾಲೂಕಿನಲ್ಲಿ ಉತ್ತಮ ಸಾಧನೆ ತೋರಿಸಿದ ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿ ಪುರಸ್ಕರಿಸಲಾಗುವುದು.

ಕೆ.ಎಸ್.ಈಶ್ವರಪ್ಪ ಗ್ರಾಮೀಣಾಭಿವೃದ್ಧಿ ಸಚಿವ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net