

ಬೆಂಗಳೂರು: ಕೇಂದ್ರ ಸರ್ಕಾರಿಂದ ರಾಜ್ಯಕ್ಕೆ ನೀಡಲಾಗುವ ಕರೊನಾ ಲಸಿಕೆಯನ್ನು ಸಮರ್ಪಕವಾಗಿ ವಿತರಣೆ ಮಾಡಲು ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹೊಸ ಸ್‌ಟಾವೇರ್ ಅಭಿವೃದ್ಧಿಪಡಿಸುತ್ತಿದೆ.
ದೇಶದಲ್ಲಿ ಈಗಾಗಲೇ ಕರೊನಾ ಲಸಿಕೆಯ ಅಂತಿಮ ಪ್ರಾಯೋಗಿಕ ಪರೀಕ್ಷೆ ನಡೆಸುತ್ತಿದ್ದು, ಶೀಘ್ರ ಲಸಿಕೆ ಬರುವ ಬಗ್ಗೆ ಕೇಂದ್ರ ಸರ್ಕಾರವೇ ಮಾಹಿತಿ ನೀಡಿದೆ. ಜತೆಗೆ, ಎಲ್ಲ ರಾಜ್ಯಗಳಿಗೆ ಲಸಿಕೆ ಕಳುಹಿಸಲಾಗುತ್ತಿದ್ದು, ಅದರ ಸಂಗ್ರಹಣೆ ಮತ್ತು ವಿತರಣೆಗೆ ಸೂಕ್ತ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಲಿಸಿಕೆ ವಿತರಣೆಯಲ್ಲಿ ಗೊಂದಲ ಸೃಷ್ಟಿಯಾಗದಂತೆ ಮತ್ತು ಭ್ರಷ್ಟಾಚಾರ ತಡೆಗಟ್ಟುವ ನಿಟ್ಟಿನಲ್ಲಿ ‘ಕೋವಿಡ್ ವಾಕ್ಸಿನ್ ಇಂಟೆಲಿಜೆನ್ಸ್ ನೆಟ್‌ವರ್ಕ್’ (Covid vaccine intelligence network) (ಸಿವಿಐನ್) ಎಂಬ ಸ್‌ಟಾವೇರ್ ಅಭಿವೃದ್ಧಿ ಮಾಡಲು ಮುಂದಾಗಿದೆ.
ರಾಜ್ಯದಲ್ಲಿ 8.7 ಲಕ್ಷ ಜನರು ಸೋಂಕಿಗೆ ಒಳಗಾಗಿದ್ದು, ಮೊದಲ ಹಂತದಲ್ಲಿ ಕರೊನಾ ವಾರಿಯರ್ಸ್‌ಗಳಿಗೆ ಲಸಿಕೆ ನೀಡಲು ತೀರ್ಮಾನಿಸಲಾಗಿದೆ. ದ್ವಿತೀಯ ಹಂತದಲ್ಲಿ ಯಾರಿಗೆ? ಹೇಗೆ ಲಸಿಕೆ ಹಂಚಿಕೆ ಮಾಡಬೇಕು ಎಂಬುದು ಚಿಂತನೆಯಾಗಿದೆ. ಇದಕ್ಕೆ ಪರಿಹಾರ ಸೂಚಕವಾಗಿ ತಂತ್ರಜ್ಞಾನದ ಮೂಲಕ ಎಷ್ಟು ಲಸಿಕೆ ಬಂದಿದೆ? ಯಾವ ಜಿಲ್ಲೆಗೆ ಎಷ್ಟು ರವಾನೆಯಾಗಿದೆ? ಯಾರಿಗೆ ಲಸಿಕೆ ನೀಡಲಾಗುತ್ತಿದೆ? ಲಸಿಕೆ ಪಡೆದವರ ವಿಳಾಸ ಮತ್ತು ಪೂರ್ಣ ಮಾಹಿತಿ ಲಭ್ಯವಾಗಲಿದೆ ಎಂದು ತಿಳಿದುಬಂದಿದೆ.
ಸದ್ಯ ಹೊಸ ತಂತ್ರಜ್ಞಾನ ಪ್ರಯೋಗಾತ್ಮಕವಾಗಿ ಪರಿಶೀಲನೆ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಪೂರ್ಣಪ್ರಮಾಣದಲ್ಲಿ ಕೋವಿಡ್ ವ್ಯಾಕ್ಸಿನ್ ಇಂಟಲಿಜೆನ್ಸ್ ನೆಟ್‌ವರ್ಕ್ ಕಾರ್ಯಾರಂಭವಾಗಲಿದೆ ಎಂದು ಆರೋಗ್ಯ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.