ಕೋವಿಡ್-19 ಚಿಕಿತ್ಸೆಗಿಂತ ಟೆಸ್ಟ್ ಶುಲ್ಕಕ್ಕೆ ಬೆದರಿದ ಸಿಂಧನೂರು ತಾಲೂಕಿನ ಜನ

CT scan
Published on

ಸಿಂಧನೂರು: ತಾಲೂಕಿನಲ್ಲಿ ಕೋವಿಡ್-19 ಚಿಕಿತ್ಸೆಯ ವೆಚ್ಚಕ್ಕಿಂತ ಸಿಟಿ ಸ್ಕ್ಯಾನ್, ರಕ್ತ ಪರೀಕ್ಷೆಯ ಶುಲ್ಕಕ್ಕೆ ಜನರು ಬೆದರಿ ಹೋಗಿದ್ದಾರೆ.

ಹದಿನೈದು ದಿನಗಳಿಂದ ತಾಲೂಕಿನಲ್ಲಿ ಕೋವಿಡ್-19 ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು ಈಗಾಗಲೇ ಒಂದು ಸಾವಿರಕ್ಕೂ ಅಧಿಕ ಕೋವಿಡ್-19 ಪ್ರಕರಣಗಳು ದಾಖಲಾಗಿದ್ದು, ಚಿಕಿತ್ಸೆಗಾಗಿ ಜನರು ಪರದಾಡುತ್ತಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಕೋವಿಡ್ ಆಸ್ಪತ್ರೆ ವ್ಯವಸ್ಥೆ ಮಾಡಿದ್ದರೂ ಅದು ಆಟಕ್ಕುಂಟು ಲೆಕ್ಕಕ್ಕಿಲ್ಲ ಎಂಬಂತಿದೆ. ಬೆಡ್, ಆಕ್ಸಿಜನ್ ಸಮಪರ್ಕವಾಗಿಲ್ಲ ಎನ್ನುವ ದೂರುಗಳಿವೆ.

ಇನ್ನೂ ನಗರದ ಮೂರು ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್-19 ಚಿಕಿತ್ಸಾ ಕೇಂದ್ರಗಳನ್ನಾಗಿಸಿದ್ದು ಅಲ್ಲಿ ಬೆಡ್, ಆಕ್ಸಿಜನ್ ಶುಲ್ಕ ವಿಧಿಸಲಾಗುತ್ತದೆ. ಅದಕ್ಕಿಂತ ದುಬಾರಿಯಾಗಿದ್ದು ಸಿಟಿ ಸ್ಕ್ಯಾನ್, ರಕ್ತ ಪರೀಕ್ಷೆಯ ಶುಲ್ಕ. ಸಿಟಿ ಸ್ಕ್ಯಾನ್‌ಗೆ ಒಬ್ಬ ಕೋವಿಡ್-19 ಸೋಂಕಿತರಿಗೆ 4 ಸಾವಿರ ರೂ. ಹಾಗೂ ರಕ್ತ ಪರೀಕ್ಷೆಗೆ 3500 ಸಾವಿರ ರೂ. ನಿಗದಿಪಡಿಸಿದ್ದು ಈ ಶುಲ್ಕ ಬಡ ಸೋಂಕಿತರಿಗೆ ಹೊರೆಯಾಗಿದೆ.

ಮೊದಲೇ ಕೋವಿಡ್-19 ಸೋಂಕಿನ ಭಯದ ಜತೆಗೆ ಈಗ ಶುಲ್ಕದ ಹೊರೆ ಭಾರಿ ಪೆಟ್ಟು ನೀಡಿದೆ. ಈಗಾಗಲೇ ಸಚಿವ ಸುಧಾಕರ ಕೂಡ ಸಿಟಿ ಸ್ಕ್ಯಾನ್ 1500 ರೂ. ಪಡೆಯಬೇಕೆಂಬ ಆದೇಶವನ್ನು ಕೂಡ ಮಾಡಿದ್ದಾರೆ. ಆದರೆ, ಖಾಸಗಿ ಆಸ್ಪತ್ರೆಗಳು ಆದೇಶ ಪಾಲಿಸುವ ಖಾತ್ರಿ ಇಲ್ಲ. ಈ ಬಗ್ಗೆ ತಾಲೂಕು ಆಡಳಿತ ಹಾಗೂ ಆರೋಗ್ಯ ಇಲಾಖೆಯೇ ಕ್ರಮಕ್ಕೆ ಮುಂದಾಗಬೇಕಿದೆ.

ಕೋವಿಡ್-19 ಸೋಂಕಿತರ ಸಿಟಿ ಸ್ಕ್ಯಾನ್‌ಗೆ 1500 ರೂ. ಮಾತ್ರ ಪಡೆದುಕೊಳ್ಳಬೇಕು. ರಕ್ತ ಪರೀಕ್ಷೆಗೂ ಹೆಚ್ಚಿನ ಹಣ ಪಡೆಯುವಂತಿಲ್ಲ. ಈಗಾಗಲೇ ಸಚಿವರು ಸೂಚನೆ ನೀಡಿದ್ದು ಎಲ್ಲಾ ಸೆಂಟರ್‌ಗಳಿಗೆ ನೋಟಿಸ್ ನೀಡಲಾಗುವುದು. ಹಣ ಹೆಚ್ಚುವರಿ ಪಡೆಯುವ ಬಗ್ಗೆ ದೂರು ಬಂದರೆ ಕ್ರಮಕ್ಕೆ ಮುಂದಾಗಲಾಗುವುದು. ಖಾಸಗಿಯವರು ಇದಕ್ಕೆ ಅವಕಾಶ ಮಾಡಿಕೊಡಬಾರದು.| ಡಾ.ಅಯ್ಯನಗೌಡ, ತಾಲೂಕು ಆರೋಗ್ಯಾಧಿಕಾರಿ, ಸಿಂಧನೂರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net