ರಾಜ್ಯರಾಜಧಾನಿಯಲ್ಲಿ ಗುರುವಾರ 889 ಜನರಿಗೆ ಕರೊನಾ ಗುದ್ದು

Corona Positive Case - Copy
Published on

ಬೆಂಗಳೂರು: ರಾಜಧಾನಿಯಲ್ಲಿ ಕರೊನಾ ವೈರಸ್ ಸ್ಪೋಟವಾಗಿದ್ದು, ಗುರುವಾರ 889 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿಗೆ 3 ಜನರು ಬಲಿಯಾಗಿದ್ದು, ಮೃತರ ಸಂಖ್ಯೆ ಶತಕದ ಗಡಿ (100) ಮುಟ್ಟಿದೆ. 30 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಈವರೆಗೆ 573 ಮಂದಿ ಗುಣಮುಖರಾದಂತಾಗಿದೆ. ನಗರದಲ್ಲಿ ಕೋವಿಡ್ ಆಸ್ಪತ್ರೆಗಳು, ಆರೋಗ್ಯ ಕೇಂದ್ರಗಳು ಹಾಗೂ ಆರೈಕೆ ಕೇಂದ್ರಗಳು ಒಳಗೊಂಡಂತೆ 5,505 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 118 ಜನರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಹೆರಿಗೆ ಸೇವೆ ನೀಡದ ಆಸ್ಪತ್ರೆಗಳು: ಹೆರಿಗಾಗಿ ಆಸ್ಪತ್ರೆಗೆ ಬಂದ ತುಂಬು ಗರ್ಭಿಣಿಯನ್ನು ಸೋಂಕಿರಬಹುದು ಎಂಬ ಭಯದಿಂದ ದಾಖಲಿಸಿಕೊಳ್ಳದೆ ವಾಪಸ್ ಕಳುಹಿಸಿದ ಘಟನೆ ಬುಧವಾರ ತಡರಾತ್ರಿ ನಡೆದಿದೆ. ಭೀಮನಕುಪ್ಪೆ ನಿವಾಸಿ ಮಮತಾ ಕೆಂಗೇರಿಯ ಬಿಜಿಎಸ್ ಆಸ್ಪತ್ರೆಗೆ ಹೋದಾಗ ದಾಖಲಿಸಿಕೊಂಡಿಲ್ಲ. ಬಳಿಕ ಸರ್ಕಾರಿ ಆಸ್ಪತ್ರೆ ವಾಣಿವಿಲಾಸಕ್ಕೆ ಹೋದರೆ, ಅಲ್ಲಿಯೂ ಹೆರಿಗೆ ಮಾಡಿಸಲು ನಿರಾಕರಿಸಿದ್ದ ಕಾರಣ ಮಹಿಳೆ ಆಸ್ಪತ್ರೆ ಹೊರಭಾಗದಲ್ಲಿ ನೋವಿನಿಂದ ನರಳುತ್ತಿದ್ದರು.

ತೃತೀಯ ಲಿಂಗಿಗೆ ಸೋಂಕು ಅನಾರೋಗ್ಯದ ಕಾರಣ ಪರೀಕ್ಷೆಗೆ ಒಳಪಟ್ಟ ತೃತೀಯಲಿಂಗಿಗೆ ಗುರುವಾರ ಸೋಂಕು ದೃಢಪಟ್ಟಿರುವುದು ವರದಿಯಾಗಿದೆ.

ಶವಗಳ ಅಂತ್ಯಕ್ರಿಯೆ ಆಗುತ್ತಿಲ್ಲ: ಸೋಂಕಿನಿಂದ ರಾಜೀವ್ ಗಾಂಧಿ ಆಸ್ಪತ್ರೆಯಲ್ಲಿ ನಾಲ್ವರು ಮೃತಪಟ್ಟು ಎರಡು ದಿನವಾದರೂ ಅಂತ್ಯಸಂಸ್ಕಾರ ನಡೆಸಿಲ್ಲ. ಬಿಬಿಎಂಪಿ ಸಿಬ್ಬಂದಿಗೆ ಈ ಬಗ್ಗೆ ಮಾಹಿತಿ ನೀಡಿದ್ದರೂ ಅಂತ್ಯಕ್ರಿಯೆಗೆ ಕೊಂಡೊಯ್ಯದ ಕಾರಣ ಶವಾಗಾರದಲ್ಲಿ ಇಡಲಾಗಿದೆ ಎಂದು ಆಸ್ಪತ್ರೆ ನಿರ್ದೇಶಕ ಡಾ. ನಾಗರಾಜ್ ಸುದ್ದಿಗಾರರಿಗೆ ಮಾಹಿತಿ ನೀಡಿದ್ದಾರೆ.

ವಿಲೇವಾರಿ ಕಾರಣದ ಪಿಪಿಇ ಕಿಟ್: ಕರೊನಾ ಸಂಬಂಧಿತ ಎಲ್ಲ ಕೆಲಸಗಳಿಗೂ ಮಾಸ್ಕ್, ಗ್ಲೌಸ್, ಪಿಪಿಇ ಕಿಟ್ ಬಳಕೆ ಮಾಡಲಾಗುತ್ತಿದೆ. ಆದರೆ, ಬಳಕೆ ನಂತರ ಅವುಗಳ ವಿಲೇವಾರಿ ಸರಿಯಾಗಿ ಆಗುತ್ತಿಲ್ಲ. ಬೌರಿಂಗ್ ಆಸ್ಪತ್ರೆಯಲ್ಲಿ ವಾರ ಕಳೆದರೂ ಪಿಪಿಇ ಕಿಟ್​ಗಳು ರಾಶಿರಾಶಿ ಬಿದ್ದಿವೆ. ಬುಧವಾರ ಜೆ.ಸಿ. ನಗರದ ಸ್ಮಶಾನದಲ್ಲಿ ಪಿಪಿಇ ಕಿಟ್ ಎಸೆದಿರುವ ಬಗ್ಗೆ ಬಿಬಿಎಂಪಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದರು. ಗುರುವಾರ ಕೋರಮಂಗಲ, ಹೆಬ್ಬಾಳ ರಸ್ತೆಯಲ್ಲಿ ಪಿಪಿಇ ಕಿಟ್ ಎಸೆದಿದ್ದು, ಜನರಲ್ಲಿ ಆತಂಕ ಉಂಟು ಮಾಡಿದೆ. ಮೆಡಿಕಲ್ ತ್ಯಾಜ್ಯ ವಿಲೇವಾರಿಗೆ 4 ಏಜೆನ್ಸಿಗಳನ್ನು ನೇಮಿಸಿದ್ದರೂ, ಸರಿಯಾಗಿ ಕಾರ್ಯನಿರ್ವಹಿಸಿಲ್ಲ ಎಂದು ಜನರು ದೂರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net