

ಸಿರವಾರ: ಕೋವಿಡ್-19 ಎರಡನೇ ಅಲೆಯ ಆರ್ಭಟಕ್ಕೆ ಅಂಜಿರುವ ಜನರು ಕರೊನಾ ವ್ಯಾಕ್ಸಿನ್ ಹಾಕಿಸಿಕೊಳ್ಳಲು ತಾಲೂಕಿನ ಆಸ್ಪತ್ರೆಗಳಿಗೆ ಮುಗಿಬಿಳುತ್ತಿದ್ದಾರೆ.
ಕೆಲ ತಿಂಗಳಗಳ ಹಿಂದೆ ಲಸಿಕೆ ಪಡೆಯುವಂತೆ ಅಧಿಕಾರಿಗಳೂ ಎಷ್ಟೇ ಮನವಿ ಮಾಡಿದರೂ ಹಾಕಿಸಿಕೊಳ್ಳದ ಜನರು, ಸೋಂಕಿತರ ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದಂತೆ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಪಡೆಯಲು ಹೆಸರು ನೋಂದಣಿ ಮತ್ತು ಲಸಿಕೆ ಹಾಕಿಸಿಕೊಳ್ಳಲು ದೈಹಿಕ ಅಂತರ ಮರೆತು ಆಸ್ಪತ್ರೆಗಳ ಬಾಗಿಲು ಕಾಯುತ್ತಿದ್ದಾರೆ.
ಕೋವ್ಯಾಕ್ಸಿನ್ ಕೊರತೆ: ಶಾಸಕ ರಾಜಾ ವೆಂಕಟಪ್ಪ ನಾಯಕ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ಹೆಚ್ಚಿನ ವ್ಯಾಕ್ಸಿನ್ ಪೂರೈಕೆಗೆ ಜಿಲ್ಲಾ ವೈದ್ಯಾಧಿಕಾರಿಗೆ ದೂರವಾಣಿ ಕರೆ ಮಾಡಿ ಸೂಚಿಸಿದ್ದರೂ ಮಂಗಳವಾರ ಲಸಿಕೆ ಬಂದಿರಲಿಲ್ಲ. ಇದನ್ನು ಪಡೆಯಲಿಕ್ಕೆಂದು ಬಂದವರೆಲ್ಲ ಲಸಿಕೆ ಕೊರತೆ ಕಾರಣ ಮರಳಿ ಮನೆಗೆ ಹೋಗುವಂತಾಗಿದೆ.
ಪಟ್ಟಣದ 50 ಸಾವಿರಕ್ಕೂ ಅಧಿಕ ಜನಸಂಖ್ಯೆ ಮತ್ತು ತಾಲೂಕಿನ ಹಳ್ಳಿಗರ ಸಂಖ್ಯೆಗೆ ಸಿರವಾರ ಆರೋಗ್ಯ ಕೇಂದ್ರವೇ ಆಧಾರವಾಗಿದೆ. ಇಲ್ಲಿಗೆ ಕೇವಲ 70 ರಿಂದ 80 ಅಷ್ಟೇ ವ್ಯಾಕ್ಸಿನ್ ಪೂರೈಸುತ್ತಿರುವುದರಿಂದ ಬೆರಳೆಣಿಕೆ ಜನರಿಗಷ್ಟೇ ಲಸಿಕೆ ಸೌಲಭ್ಯ ಸಿಗುವಂತಾಗಿದೆ.
ನಾನು ಕೋವಿಶೀಲ್ಡ್ ಎರಡನೇ ಡೋಸ್ ಪಡೆಯಲು ಆಸ್ಪತ್ರೆಗೆ ಹೋದರೆ ಲಸಿಕೆ ಖಾಲಿಯಾಗಿದೆ ಎನ್ನುತ್ತಿದ್ದಾರೆ. ಇನ್ನು ನನ್ನ ಮೊಬೈಲ್‌ಗೆ ಈಗಾಗಲೇ ವ್ಯಾಕ್ಸಿನ್ ಪಡೆದಿರುವ ಬಗ್ಗೆ ಮೆಸೇಜ್ ಬಂದಿದೆ. ಈ ಕುರಿತು ಸಂಬಂಧಿಸಿದವರನ್ನು ವಿಚಾರಿಸಿದರೆ ಸಮರ್ಪಕ ಮಾಹಿತಿ ನೀಡುತ್ತಿಲ್ಲ.| ಮಲ್ಲು ಗ್ರಾಮದ ನಿವಾಸಿ ಸಿರವಾರ