

ಉಡುಪಿ: ಜಿಲ್ಲೆಯಲ್ಲಿ ಸದ್ಯ ಕೋವಿಡ್-19 ಹರಡುವಿಕೆ ನಿಯಂತ್ರಣದಲ್ಲಿದ್ದು, ಎರಡನೇ ಅಲೆ ತಡೆಗೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಲಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು. ಸೋಮವಾರ ಈ ಬಗ್ಗೆ ತಜ್ಞ ವೈದ್ಯ ಸಮಿತಿಯೊಂದಿಗೆ ಸಭೆ ನಡೆಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಜಿಲ್ಲೆಯಲ್ಲಿ ಈವರೆಗೆ 22675 ಕರೊನಾ ಪ್ರಕರಣ ವರದಿಯಾಗಿದ್ದು, ಪ್ರಸ್ತುತ ಚೇತರಿಕೆ ಪ್ರಮಾಣ ಶೇ.98.3 ಆಗಿದ್ದು, ಪ್ರತಿನಿತ್ಯ ಕನಿಷ್ಠ ಸಂಖ್ಯೆಯಲ್ಲಿ ಪಾಸಿಟಿವ್ ಪ್ರಕರಣ ವರದಿಯಾಗುತ್ತಿದೆ. ಕಳೆದ ಎರಡು ತಿಂಗಳಿನಿಂದ ಪಾಸಿಟಿವ್ ರೇಟ್ ಶೇ.1ಕ್ಕೆ ಇಳಿದಿದೆ. ಜುಲೈ, ಆಗಸ್ಟ್‌ನಲ್ಲಿ ಇದರ ಪ್ರಮಾಣ ಶೇ.20, 30ರಷ್ಟಿತ್ತು ಎಂದು ತಿಳಿಸಿದರು.
ಪ್ರಸ್ತುತ ಎರಡನೇ ಅಲೆಯನ್ನು ತಡೆಯುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯಯೋಜನೆ ರೂಪಿಸುತ್ತಿದೆ. ಜನರಲ್ಲಿ ಸದ್ಯ ಕೋವಿಡ್ ಆತಂಕ ದೂರವಾಗಿದೆ. ಆದರೆ ಕೋವಿಡ್ ಬಗ್ಗೆ ಜಾಗೃತಿ ಮಾತ್ರ ಮೂಡಿಲ್ಲ. ಕೋವಿಡ್ ಮಟ್ಟ ಹಾಕಲು ಸಾರ್ವಜನಿಕರ ಸಹಕಾರ ಅತಿಮುಖ್ಯವಾಗಿದೆ. ಸರ್ಕಾರದ ನಿಯಮಗಳನ್ನು ಎಲ್ಲರೂ ಗೌರವಿಸಿ, ಪಾಲಿಸಬೇಕು ಎಂದು ಮನವಿ ಮಾಡಿದರು.
ಎಡಿಸಿ ಸದಾಶಿವ ಪ್ರಭು, ಎಸಿ ರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್‌ಚಂದ್ರ ಸೂಡ, ಕೋವಿಡ್ ನೋಡಲ್ ಅಧಿಕಾರಿ ಡಾ.ಪ್ರಶಾಂತ್ ಭಟ್, ಜಿ.ಪಂ. ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್ ಸುದ್ದಿಗೋಷ್ಠಿಯಲ್ಲಿದ್ದರು.