

ಉಡುಪಿ: ಜಿಲ್ಲೆಯಲ್ಲಿ ಕೋವಿಡ್-19 ಮೊದಲನೇ ಮತ್ತು ಎರಡನೇ ಡೋಸ್ ಲಸಿಕೆ ನೀಡುವಲ್ಲಿ ಈಗಾಗಲೇ ಶೇ.100 ಗುರಿ ಸಾಧಿಸಲಾಗಿದ್ದು, ಕೋವಿಡ್-19 ಸಂಭಾವ್ಯ ನಾಲ್ಕನೇ ಅಲೆ ತೀವ್ರತೆ ಕಡಿಮೆ ಮಾಡುವ ನಿಟ್ಟಿನಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ 18 ವರ್ಷದಿಂದ 59 ವರ್ಷದ ವರೆಗಿನ ಸಾರ್ವಜನಿಕರಿಗೆ ಸೆಪ್ಟಂಬರ್ 30 ರವರೆಗೆ ಉಚಿತ ಮುನ್ನೆಚ್ಚರಿಕಾ ಡೋಸ್ ನೀಡುವ ಕಾರ್ಯಕ್ರಮಕ್ಕೆ ಜುಲೈ 18ರಂದು ಅಜ್ಜರಕಾಡು ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಚಾಲನೆ ನೀಡಲಾಗುವುದು.
ಜಿಲ್ಲೆಯಲ್ಲಿ ಜ.16, 2021ರಂದು ಕೋವಿಡ್-19 ಲಸಿಕಾಕರಣ ಆರಂಭಗೊಂಡಿದ್ದು, ಈಗಾಗಲೇ 18 ವರ್ಷ ಮೇಲ್ಪಟ್ಟ 10,04,712 ಫಲಾನುಭವಿಗಳು ಮೊದಲನೇ ಡೋಸ್ ಲಸಿಕೆ ಪಡೆದಿದ್ದಾರೆ. 10,00,092 ಮಂದಿ ಎರಡನೇ ಡೋಸ್ ಕೋವಿಡ್ ಲಸಿಕೆ ಪಡೆದಿದ್ದು, ಶೇ. 100.11 ಸಾಧನೆ ಆಗಿದೆ. ಜಿಲ್ಲೆಯಲ್ಲಿ ಮುನೆಚ್ಚರಿಕಾ ಡೋಸ್ ಪಡೆಯಲು 18 ರಿಂದ 59 ವರ್ಷದ 8 ಲಕ್ಷ ಫಲಾನುಭವಿಗಳನ್ನು ಗುರುತಿಸಲಾಗಿದೆ. ವಿದೇಶಕ್ಕೆ ತೆರಳುವ 18 ವರ್ಷ ಮೇಲ್ಪಟ್ಟ ಫಲಾನುಭವಿಗಳು ಎರಡನೇ ಡೋಸ್ ಪಡೆದು 3 ತಿಂಗಳು ದಾಟಿದಲ್ಲಿ ಮುಂಜಾಗ್ರತಾ ಡೋಸ್ ಲಸಿಕೆ ಪಡೆಯಬಹುದಾಗಿದೆ.
ಸೆ. 30 ರ ಒಳಗೆ 18 ವರ್ಷದಿಂದ 59 ವರ್ಷದ ವರೆಗಿನ ಎಲ್ಲರಿಗೂ ಕೋವಿಡ್-19 ಮುನ್ನೆಚ್ಚರಿಕಾ ಲಸಿಕೆ ನೀಡಲು ಪ್ರಾರಂಭದ ಹಂತದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸರ್ಕಾರಿ ವೈದ್ಯಕೀಯ ಕೇಂದ್ರಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಮುಂದಿನ ದಿನದಲ್ಲಿ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ಗ್ರಾಮೀಣ ಪ್ರದೇಶದಲ್ಲಿ ಹಾಗೂ ಹೆಚ್ಚಿನ ಸಂಖ್ಯೆಯ ಕಾರ್ಮಿಕರು ಕಾರ್ಯ ನಿರ್ವಹಿಸುವ ವಿವಿಧ ಖಾಸಗಿ ಸಂಸ್ಥೆಗಳಲ್ಲೂ ಮುನ್ನೆಚರಿಕಾ ಡೋಸ್ ನೀಡಲಾಗುತ್ತದೆ.