ಉಡುಪಿಯಲ್ಲಿ 2ನೇ ಸೋಂಕಿತ ಡಿಸ್ಚಾರ್ಜ್

covid
Published on

ಉಡುಪಿ: ಜಿಲ್ಲೆಯಲ್ಲಿ ಕರೊನಾ ಆತಂಕ ದೂರವಾಗುತ್ತಿದೆ. ಜಿಲ್ಲೆಯಲ್ಲಿ ಮತ್ತೊಬ್ಬ ಕರೊನಾ ಸೋಂಕಿತ ವ್ಯಕ್ತಿಯೂ ಮಂಗಳವಾರ ಗುಣಮುಖರಾಗಿದ್ದಾರೆ. ದುಬೈನಿಂದ ಬಂದಿದ್ದ 35 ವರ್ಷದ ಜಿಲ್ಲೆಯ ಎರಡನೇ ಕರೊನಾ ಸೋಂಕಿತ ಈ ವ್ಯಕ್ತಿ ಸಂಪೂರ್ಣ ಗುಣಮುಖನಾಗಿ ಮಂಗಳವಾರ ಮಧ್ಯಾಹ್ನ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಸುಧೀರ್ ಚಂದ್ರ ಸೂಡ ತಿಳಿಸಿದ್ದಾರೆ.

ಕಾಪು ತಾಲೂಕು ಮಣಿಪುರದ ಈ ವ್ಯಕ್ತಿ ಮಾರ್ಚ್ 17ರಂದು ದುಬೈನಿಂದ ಉಡುಪಿಗೆ ಆಗಮಿಸಿದ್ದರು. ಬಳಿಕ ಈತನಲ್ಲಿ ಕರೊನಾ ಲಕ್ಷಣ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಚ್ 27ರಂದು ಕಾರ್ಕಳದ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಡಾ.ಟಿಎಂಎ ಪೈ ಕೊವಿಡ್-19 ಆಸ್ಪತ್ರೆಗೆ ಸೇರಿಸಿದ್ದು, ಗಂಟಲು ದ್ರವದ ಮಾದರಿ ಪರೀಕ್ಷೆಯಲ್ಲಿ ಕರೊನಾ ಪಾಸಿಟಿವ್ ಪತ್ತೆಯಾಗಿತ್ತು. ಚಿಕಿತ್ಸೆಯಲ್ಲಿ ನಿಧಾನಕ್ಕೆ ಚೇತರಿಸಿಕೊಂಡ ಈತ ಸದ್ಯ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಈತನ ಗಂಟಲಿನ ದ್ರವದ ಮಾದರಿಯನ್ನು ಎರಡು ಬಾರಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು, ಎರಡು ಮಾದರಿಗಳಲ್ಲಿ ನೆಗೆಟಿವ್ ವರದಿ ಬಂದಿದೆ. ಇದೀಗ ಆತ ಸೋಂಕಿನಿಂದ ಸಂಪೂರ್ಣ ಚೇತರಿಸಿರುವುದು ಖಚಿತವಾಗಿದೆ ಎಂದು ಡಿಎಚ್‌ಒ ತಿಳಿಸಿದ್ದಾರೆ.

ಈತನ ಸಂಪರ್ಕದಲ್ಲಿದ್ದ 200 ಮಂದಿಯ ವರದಿ ನೆಗೆಟಿವ್: ಜಿಲ್ಲಾಡಳಿತ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ವ್ಯವಸ್ಥಿತವಾಗಿ ವೈರಸ್ ಸೋಂಕು ಹರಡದಂತೆ ಯೋಜನೆ ಸಿದ್ಧಪಡಿಸಿತ್ತು. 3 ಕಿ.ಮೀ. ವ್ಯಾಪ್ತಿಯಲ್ಲಿ ಆರೋಗ್ಯ ಇಲಾಖೆ ಸರ್ವೆಲೆನ್ಸ್ ಮಾಡಿತ್ತು. ಮಣಿಪುರದ ಈ ವ್ಯಕ್ತಿಯ ನೇರ ಸಂಪರ್ಕಕ್ಕೆ, ನೇರ ಸಂಪರ್ಕದಿಂದ ದ್ವಿತೀಯ ಹಂತದ ಸಂಪರ್ಕಕ್ಕೆ ಒಳಪಟ್ಟ ಸುಮಾರು 200 ಮಂದಿಯನ್ನು ಪತ್ತೆ ಮಾಡಿ, ಅವರನ್ನು ಸರ್ಕಾರಿ ಕ್ವಾರಂಟೈನ್‌ನಲ್ಲಿ ಇರಿಸಲಾಗಿತ್ತು. ಎಲ್ಲರನ್ನೂ ತಪಾಸಣೆಗೆ ಒಳಪಡಿಸಿ, ಮಾದರಿ ಸಂಗ್ರಹಿಸಿದ್ದು, ಎಲ್ಲರ ವರದಿಯೂ ನೆಗೆಟಿವ್ ಬಂದಿದೆ. ಎಲ್ಲರನ್ನೂ ಸರ್ಕಾರಿ ಕ್ವಾರಂಟೈನ್‌ನಿಂದ ಡಿಸ್ಚಾರ್ಜ್ ಮಾಡಿ ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

ಮೂವರಲ್ಲಿ ಇಬ್ಬರು ಗುಣಮುಖ: ಉಡುಪಿ ಜಿಲ್ಲೆಯ ಮೂರು ಪಾಸಿಟಿವ್ ಪ್ರಕರಣಗಳಲ್ಲಿ ಇಬ್ಬರು ಸೋಂಕಿತರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇನ್ನೊಬ್ಬ ವ್ಯಕ್ತಿ ಶೀಘ್ರ ಡಿಸ್ಚಾರ್ಜ್ ಆಗಲಿದ್ದಾರೆ ಎಂದು ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

39 ಮಂದಿಯ ರಿಪೋರ್ಟ್ ನೆಗೆಟಿವ್: ಜಿಲ್ಲಾಡಳಿತ ಮಂಗಳವಾರ ಸ್ವೀಕರಿಸಿದ ಎಲ್ಲ 39 ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ತೀವ್ರ ತರದ ಶ್ವಾಸಕೋಶದ ಸೋಂಕಿನ ಸಮಸ್ಯೆ 1, ಕೋವಿಡ್ -19 ಸೋಂಕಿತರ ಸಂಪರ್ಕವಾದ 105 ಮಂದಿಯ, ಇಲ್‌ನೆಸ್‌ಗೆ ಸಂಬಂಧಿಸಿ ಒಬ್ಬರು ಸೇರಿದಂತೆ ಒಟ್ಟು 108 ಮಂದಿಯ ಮಾದರಿಯನ್ನು ಮಂಗಳವಾರ ಸಂಗ್ರಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ. ಮಂಗಳವಾರ ಇಬ್ಬರು ಮಹಿಳೆಯರು, ಎಂಟು ಪುರುಷರು ಸೇರಿದಂತೆ ಒಟ್ಟು 17 ಮಂದಿ ಐಸೊಲೇಶನ್ ವಾರ್ಡ್‌ಗೆ ದಾಖಲಾಗಿದ್ದಾರೆ. ಇನ್ನೂ 125 ಮಂದಿಯ ವರದಿ ಬರಲು ಬಾಕಿ ಇದೆ. ಮಂಗಳವಾರಕ್ಕೆ 105 ಮಂದಿ 28 ದಿನದ ಕ್ವಾರಂಟೈನ್ ಪೂರೈಸಿದ್ದಾರೆ. ಐಸೊಲೇಶನ್ ವಾರ್ಡ್‌ನಿಂದ 8 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆ ಕ್ವಾರಂಟೈನ್‌ನಿಂದ 19 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net