ರಾಜಧಾನಿಯಲ್ಲಿ 12 ಲಕ್ಷ ಮಂದಿ ಕರೊನಾ ಸಂಪರ್ಕಿತರು : ಸೋಂಕಿತರ ಸಂಖ್ಯೆ 2 ಲಕ್ಷ ಗಡಿ ಸನಿಹ

carona logo
Published on

ಬೆಂಗಳೂರು : ನಗರದಲ್ಲಿ ಕರೊನಾ ಸೋಂಕಿತರ ಸಂಖ್ಯೆ 1.97 ಲಕ್ಷಕ್ಕೆ ಏರಿಕೆಯಾಗಿದ್ದು, ಅವರೊಂದಿಗೆ 12 ಲಕ್ಷ ಮಂದಿ ಸಂಪರ್ಕಕ್ಕೆ ಬಂದಿದ್ದಾರೆ. ಸಾಂಕ್ರಾಮಿಕ ರೋಗವಾದ ಕರೊನಾ ನಗರದಲ್ಲಿ ಮಾ.8 ರಂದು ಮೊಟ್ಟಮೊದಲ ಬಾರಿಗೆ ವಿದೇಶದಿಂದ ಬಂದ ವ್ಯಕ್ತಿಯಲ್ಲಿ ಪತ್ತೆಯಾಗಿತ್ತು. ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರನ್ನು ಪ್ರತ್ಯೇಕವಾಗಿಟ್ಟು ಪರೀಕ್ಷೆ ಮಾಡಲಾಗಿತ್ತು. ಈವರೆಗೆ ಪ್ರಾಥಮಿಕ ಸಂಪರ್ಕದ 5,38,599 ಪ್ರಾಥಮಿಕ ಸಂಪರ್ಕಿತರು ಮತ್ತು 6,61,834 ಮಂದಿ ದ್ವಿತೀಯ ಸಂಪರ್ಕದಲ್ಲಿ ಇರುವವರನ್ನು ಪತ್ತೆ ಮಾಡಿರುವ ಕುರಿತು ಬಿಬಿಎಂಪಿ ಬುಲೆಟಿನ್‌ನಲ್ಲಿ ಮಾಹಿತಿ ನೀಡಲಾಗಿದೆ.

ಸೋಂಕಿತರ ಸಂಖ್ಯೆ 2 ಲಕ್ಷ ಸನಿಹ: ರಾಜಧಾನಿಯಲ್ಲಿ ಸೋಮವಾರ 2,886 ಹೊಸ ಸೋಂಕಿತ ಪ್ರಕರಣ ಪತ್ತೆಯಾಗಿದೆ. ಒಟ್ಟು ಸೋಂಕಿತರ ಸಂಖ್ಯೆ 1,97,646ಕ್ಕೆ ಏರಿಕೆಯಾಗಿದ್ದು, 2 ಲಕ್ಷ ಗಡಿ ಸನಿಹದಲ್ಲಿದೆ. 3,536 ಮಂದಿ ಸೋಂಕು ಮುಕ್ತರಾಗಿದ್ದು, ಒಟ್ಟು ಗುಣಮುಖರ ಸಂಖ್ಯೆ 1,53,884ಕ್ಕೆ ತಲುಪಿದೆ. 41,072 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, ಅದರಲ್ಲಿ 259 ಮಂದಿ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಂದೇ ದಿನ 32 ಮಂದಿ ಸಾವಿಗೀಡಾಗುವ ಮೂಲಕ, ಸಾವಿನ ಸಂಖ್ಯೆ 2,689ಕ್ಕೆ ಏರಿಕೆಯಾಗಿದೆ.

ಸಂಪರ್ಕಿತರಿಗೆ ಸಂಚಾರಕ್ಕೆ ಕಡಿವಾಣವಿಲ್ಲ: ಈಗ ಕರೊನಾ ಸಾಮಾನ್ಯ ರೋಗದಂತಾಗಿದ್ದು, ಎಲ್ಲರು ಮುಕ್ತವಾಗಿ ಸಂಚಾರ ಮಾಡುತ್ತಿದ್ದಾರೆ. ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕಕ್ಕೆ ಬಂದವರು ಕೂಡ ಕ್ವಾರಂಟೈನ್ ಆಗದೆ, ಎಲ್ಲೆಡೆ ಸಂಚಾರ ಮಾಡುತ್ತಿದ್ದಾರೆ. ಹೀಗಾಗಿ, ನಮಗೆ ಸೋಂಕು ಬರದಂತೆ ಜಾಗ್ರತೆವಹಿಸಲು ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು, ಕೈಗಳ ಶುಚಿತ್ವ ಹಾಗೂ ಸ್ಯಾನಿಟೈಸರ್ ಬಳಕೆ ಮಾಡುವುದು ಮುಖ್ಯವಾಗಿದೆ. ಜತೆಗೆ ಜ್ವರ, ಉಸಿರಾಟ ತೊಂದರೆ ಇದ್ದವರು ತತಕ್ಷಣ ಚಿಕಿತ್ಸೆ ಪಡೆಯುವ ಮೂಲಕ ಜೀವಹಾನಿ ತಡೆಗಟ್ಟಬಹುದಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net