ಕರೊನಾಗೆ ತುಮಕೂರು ಜಿಲ್ಲೆಯಲ್ಲಿ ಮೂರನೇ ಬಲಿ

23 cnh 2
Published on

ತುಮಕೂರು: ತುಮಕೂರಿನ ಪಿಎಚ್ ಕಾಲನಿ ನಿವಾಸಿ, ಮಧುಗಿರಿ ಪುರಸಭೆ ಸದಸ್ಯೆ ಪತಿ (57 ವರ್ಷ) ಕರೋನಾ ಸೋಂಕಿಗೆ ಮಂಗಳವಾರ ಬಲಿಯಾಗಿದ್ದಾರೆ.

ಮಧುಗಿರಿ ಕಾಂಗ್ರೆಸ್ ಮುಖಂಡರಾಗಿದ್ದ ಇವರು ಮಧುಗಿರಿ, ತುಮಕೂರು ಹಾಗೂ ಬೆಂಗಳೂರಿನ ಸಾಕಷ್ಟು ಜನರೊಂದಿಗೆ ಸಂಪರ್ಕದಲ್ಲಿ ದ್ದರು ಎಂಬುದು ಜಿಲ್ಲಾಡಳಿತಕ್ಕೆ ತಲೆನೋವಾಗಿದೆ.

ಪುರಸಭೆ ಸದಸ್ಯೆಯ ಪತಿಯಾಗಿರುವ ಇವರು ವೃತ್ತಿಯಲ್ಲಿ ಟೈಲರ್ ಆಗಿದ್ದು ಕೆಲ ದಿನಗಳಿಂದ ಪಕ್ಷದ ವಿವಿಧ ಕಾರ್ಯಕ್ರಮಗಳಲ್ಲಿ ಸಕ್ರ್ರಿಯರಾಗಿದ್ದರು. ಅನಾರೋಗ್ಯದ ಕಾರಣಕ್ಕೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದಾಗ ರೋಗ ಲಕ್ಷಣದ ಹಿನ್ನೆಲೆಯಲ್ಲಿ ಜಿಲ್ಲಾ ಕೋವಿಡ್ ಆಸ್ಪತ್ರೆಗೆ ಕಳುಹಿಸಲಾಗಿತ್ತು. ಮಂಗಳವಾರ ಬೆಳಗ್ಗೆ ಹೃದಯಾಘಾತದಿಂದ ಮೃತನಾಗಿದ್ದು ಗಂಟಲು ದ್ರವದ ಪರೀಕ್ಷೆ ನಡೆಸಿ ಕರೊನಾ ದೃಢವಾದ ಹಿನ್ನೆಲೆಯಲ್ಲಿ ಸರ್ಕಾರದ ಮಾರ್ಗಸೂಚಿ ಅನ್ವಯ ಅಂತ್ಯಕ್ರಿಯೆ ನಡೆಸಲಾಗುತ್ತಿದೆ.

ಮೃತ ವ್ಯಕ್ತಿಯ ಜತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರನ್ನು ಗುರುತಿಸಿ ಮಧುಗಿರಿ ಪಟ್ಟಣದ ರಾಜೀವ್‌ಗಾಂಧಿ ಕ್ರೀಡಾಂಗಣದ ಸಮೀಪದಲ್ಲಿರುವ ಖಾಸಗಿ ವಸತಿ ಗೃಹದಲ್ಲಿ ಕ್ವಾರಂಟೈನ್ ಮಾಡಲಾಗಿದೆ.

ಗ್ರಾಮೀಣರ ನೆಮ್ಮದಿಗೆ ಭಂಗ : ಕರೊನಾ ಜಿಲ್ಲೆಯ ಗ್ರಾಮೀಣರ ನೆಮ್ಮದಿ ಕೆಡಿಸಿದೆ. 11 ವಿಧಾನಸಭಾ ಕ್ಷೇತ್ರದಲ್ಲಿಯೂ ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತ ಪರದಾಡುತ್ತಿದೆ. ಮಂಗಳವಾರ ಚಿಕ್ಕನಾಯಕನಹಳ್ಳಿ, ಕೊರಟಗೆರೆ ತಾಲೂಕುಗಳಲ್ಲಿ ತಲಾ 1 ಹಾಗೂ ಮಧುಗಿರಿ ತಾಲೂಕಿನಲ್ಲಿ 2 ಪಾಸಿಟಿವ್ ಪ್ರಕರಣ ದಾಖಲಾಗಿದ್ದು ಹಳ್ಳಿಹಳ್ಳಿಯಲ್ಲಿಯೂ ವೈರಸ್ ಕಾಣಿಸಿಕೊಳ್ಳಲಾರಂಭಿಸಿದೆ.

ಮಧುಗಿರಿ ಎಲ್‌ಐಸಿ ಕಚೇರಿಯಲ್ಲಿ ಕೆಲಸ ಮಾಡುವ 31 ವರ್ಷದ ಪುರುಷನಿಗೆ ಸೋಂಕು ದೃಢವಾಗಿದ್ದು, ಈತನೊಂದಿಗೆ ಪ್ರಾಥಮಿಕ ಸಂಪರ್ಕದಲ್ಲಿದ್ದ ನಾಲ್ವರನ್ನು ಸಾಂಸ್ಥಿಕ ಹಾಗೂ ಮತ್ತೆ ನಾಲ್ವರನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದೆ. ಮಹಾರಾಷ್ಟ್ರದ ಪುಣೆಯಿಂದ ಮಧುಗಿರಿಗೆ ವಾಪಸಾಗಿದ್ದ ಈತನಿಗೆ ಜೂ.21ರಂದು ಮಧುಗಿರಿ ತಾಲೂಕು ಆಸ್ಪತ್ರೆಯಲ್ಲಿ ಗಂಟಲು ದ್ರವದ ಮಾದರಿ ಪರೀಕ್ಷೆ ನಡೆಸಲಾಗಿತ್ತು.

ಐ.ಡಿ.ಹಳ್ಳಿ ಹೋಬಳಿ ಗೂಲಹಳ್ಳಿ ಗ್ರಾಮದ 29 ವರ್ಷದ ಯುವಕನಿಗೆ ಸೋಂಕು ತಗುಲಿದೆ. ಬೆಂಗಳೂರಿನ ಎಪಿಎಂಸಿ ಮಾರುಕಟ್ಟೆಯಲ್ಲಿ ಕೆಲಸ ಮಾಡುವ ಈತ ಆಚೇನಹಳ್ಳಿಯ ಸಂಬಂಧಿಕರ ಮನೆಯಲ್ಲಿದ್ದ ಎನ್ನಲಾಗಿದೆ, ಈತನ ಸಂಪರ್ಕದಲ್ಲಿದ್ದ 40 ಜನರನ್ನು ಕ್ವಾರಂಟೈನ್ ಮಾಡಲಾಗಿದೆ.

ಚಿಕ್ಕನಾಯಕನಹಳ್ಳಿ ತಾಲೂಕಿನಲ್ಲಿ ಸೋಂಕಿತರ ಸಂಖ್ಯೆ ಜಾಸ್ತಿಯಾಗುತ್ತಿದೆ. ತಾಲೂಕಿನ ಗೊಡೆಕೆರೆ ಗೊಲ್ಲರಹಟ್ಟಿಯಲ್ಲಿ 21 ವರ್ಷದ ಯುವಕನಿಗೆ ಮಂಗಳವಾರ ಸೋಂಕು ದೃಢವಾಗಿದೆ. ನೆಲಮಂಗಲದಲ್ಲಿ ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದ ಯುವಕ ಜ್ವರ ಬಂದಿದೆ ಎಂಬ ಕಾರಣಕ್ಕೆ ಜೂ.18ರಂದು ಸ್ವಗ್ರಾಮಕ್ಕೆ ಬಂದಿದ್ದ ಎನ್ನಲಾಗಿದೆ ಈತನೊಂದಿಗೆ ಸಂಪರ್ಕದಲ್ಲಿದ್ದ 8 ಜನರನ್ನು ಸಾಂಸ್ಥಿಕ ಕ್ವಾರಂಟೈನ್ ಮಾಡಲಾಗಿದೆ.

ಕೊರಟಗೆರೆ ತಾಲೂಕಿನ ಕತ್ತಿನಾಗೇನಹಳ್ಳಿ 26 ವರ್ಷದ ಮಹಿಳೆಗೆ ಸೋಂಕು ದೃಢವಾಗಿದೆ. ಪ್ರಯಾಣದ ಹಿನ್ನೆಲೆ ಇಲ್ಲದ ಮಹಿಳೆ ಹುಳಸೊಪ್ಪನಹಳ್ಳಿ ಾರಂ ಹೌಸ್‌ನಲ್ಲಿ ಕೂಲಿ ಕೆಲಸದವರಾಗಿದ್ದು, ಇವರ ಪ್ರಾಥಮಿಕ ಸಂಪರ್ಕದ 58 ಹಾಗೂ ದ್ವಿತೀಯ ಸಂಪರ್ಕದಲ್ಲಿ 100 ಜನರನ್ನು ಕ್ವಾರಂಟೇನ್ ಮಾಡಲಾಗಿದೆ. ಕೊರಟಗೆರೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ಬಂದಾಗ ಗಂಟಲು ದ್ರವ ಪರಿಕ್ಷಿಸಿ ನಂತರ ಕರೊನಾ ಸಂಶಯದ ಮೇಲೆ ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿತ್ತು. ಮಂಗಳವಾರ ಸೋಂಕು ದೃಢವಾಗಿದ್ದು ಕೊರಟಗೆರೆ ತಾಲೂಕಿನಾದ್ಯಂತ ಆತಂಕ ಮನೆಮಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net