ಕೋವಿಡ್ ನೆಪದಲ್ಲಿ ಕಾರ್ಮಿಕ ಇಲಾಖೆಯಲ್ಲಿ ಭಾರಿ ಗೋಲ್ಮಾಲ್!

corona
Published on

| ಸತೀಶ್ ಕೆ.ಬಳ್ಳಾರಿ

ಬೆಂಗಳೂರು: ಮಹದೇವಪುರ ವಲಯದಲ್ಲಿ ಕೋವಿಡ್ -19 ಲಾಕ್​ಡೌನ್ ವೇಳೆ ದಿನಸಿ ಕಿಟ್ ಹಾಗೂ ಆಹಾರ ಪೊಟ್ಟಣ ವಿತರಿಸಲು 2.23 ಕೋಟಿ ರೂ. ಖರ್ಚು ಮಾಡಲಾಗಿದೆ. ಪಾಲಿಕೆ ನೀಡಿದ ಹಣದಲ್ಲಿ ಭ್ರಷ್ಟಾಚಾರ ನಡೆದಿರುವ ಬಗ್ಗೆ ಅನುಮಾನ ವ್ಯಕ್ತವಾಗಿವೆ.

ಸೋಂಕು ಹರಡುವುದನ್ನು ತಡೆಗಟ್ಟಲು ಲಾಕ್​ಡೌನ್ ವಿಧಿಸಿದ್ದರಿಂದಾಗಿ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಹೀಗಾಗಿ ವಲಸೆ ಕಾರ್ವಿುಕರು, ಕಟ್ಟಡ ಕಾರ್ವಿುಕರು, ಆರ್ಥಿಕ ದುರ್ಬಲರು ಹಾಗೂ ಬಡವರಿಗೆ ದಿನಸಿ ಕಿಟ್ ವಿತರಣೆ ಮಾಡಲಾಯಿತು. ಜತೆಗೆ, ಸೋಂಕು ಹರಡುವುದನ್ನು ತಡೆಯಲು ಮಾಸ್ಕ್, ಸ್ಯಾನಿಟೈಸರ್, ಬ್ಲಿ್ಲಂಗ್ ಪೌಡರ್, ಜೆಟ್ಟಿಂಗ್ ಯಂತ್ರದ ಮೂಲಕ ಸೋಂಕು ನಿವಾರಕ ದ್ರಾವಣ ಸಿಂಪಡಣೆ ಮಾಡಲಾಯಿತು. ಇದಕ್ಕಾಗಿ ಸರ್ಕಾರ, ಕಾರ್ವಿುಕ ಇಲಾಖೆ ಹಾಗೂ ಬಿಬಿಎಂಪಿ ಸೇರಿ ಮೂರು ವಿಭಾಗದಲ್ಲಿ ಹಣ ಖರ್ಚು ಮಾಡಲಾಗಿದೆ. ಆದರೂ, ಪಾಲಿಕೆಯ ಈ ವಲಯದಲ್ಲಿ ಆಹಾರ ಕಿಟ್ ಸರಬರಾಜು ಮಾಡಲು ಖರ್ಚು ಮಾಡಿರುವ ಹಣದ ಪ್ರಮಾಣ ನೋಡಿದರೆ, ಅಕ್ರಮ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ.

ಮಹದೇವಪುರದಲ್ಲಿ 2.55 ಕೋಟಿ ರೂ. ಖರ್ಚು

ಕೋವಿಡ್ ಸಂಬಂಧ ವಿವಿಧ ಕಾರ್ಯಕ್ಕೆ ಕೇಂದ್ರ ಕಚೇರಿಯಿಂದ 3.5 ಕೋಟಿ ರೂ. ಮಹದೇವಪುರ ವಲಯಕ್ಕೆ ಬಿಡುಗಡೆ ಮಾಡಿದೆ. ಈ ಹಣದಲ್ಲಿ ಸೋಂಕು ನಿಯಂತ್ರಣದ ಎಲ್ಲ ಕಾರ್ಯಗಳಿಗೆ ಆಗಸ್ಟ್ ಅಂತ್ಯಕ್ಕೆ 2.55 ಕೋಟಿ ರೂ. ಖರ್ಚು ಮಾಡಲಾಗಿದೆ. ಇದರಲ್ಲಿ ಕೇವಲ ದಿನಸಿ ಕಿಟ್ ಹಾಗೂ ಆಹಾರ ಪೊಟ್ಟಣ ವಿತರಣೆಗೆ 2.23 ಕೋಟಿ ರೂ. ಖರ್ಚು ಮಾಡಿರುವ ಬಗ್ಗೆ ‘ವಿಜಯವಾಣಿ’ಗೆ ದಾಖಲೆಗಳು ಲಭ್ಯವಾಗಿದೆ. ಆಹಾರ ಕಿಟ್ ಸರಬರಾಜಿಗೆ 1.41 ಕೋಟಿ ರೂ, ಸುಬ್ರಾಯನಪಾಳ್ಯದ ಸುತ್ತಲಿನ ಜನರಿಗೆ ಆಹಾರ ಕಿಟ್ ಖರೀದಿಸಲು 21.50 ಲಕ್ಷ ರೂ., ಆಹಾರ ಕಿಟ್ ಸರಬರಾಜು ಮಾಡಲು 7 ಲಕ್ಷ ರೂ, ವಲಸೆ ಕಾರ್ವಿುಕರಿಗೆ ಊಟ ಸರಬರಾಜು ಮಾಡಲು 12.58 ಲಕ್ಷ ರೂ. ಹಾಗೂ ವಲಸೆ ಕಾರ್ವಿುಕರು ಮತ್ತು ನಿರ್ಗತಿಕರಿಗೆ ದಿನಸಿ ಕಿಟ್ ವಿತರಣೆಗೆ 41.09 ಲಕ್ಷ ರೂ. ಬಿಲ್ ಮಾಡಲಾಗಿದೆ.

ಕಾರ್ವಿುಕ ಇಲಾಖೆ ಹಣ ಎಲ್ಲಿ ಹೋಯಿತು?

ರಾಜ್ಯದ ಎಲ್ಲ ಕಟ್ಟಡ ಕಾರ್ವಿುಕರು, ವಲಸೆ ಕಾರ್ವಿುಕರು, ಬಡಜನರಿಗೆ ಕಾರ್ವಿುಕ ಇಲಾಖೆಯಿಂದ ಲಾಕ್​ಡೌನ್ ವೇಳೆ ಕಾರ್ವಿುಕ ಸಹಾಯವಾಣಿ ಆರಂಭಿಸಿ ಆಹಾರ ಮತ್ತು ದಿನಸಿ ಕಿಟ್​ಗಳನ್ನು ಖರ್ಚು ಮಾಡಲಾಗಿದೆ. ಅದರಂತೆ, ಬೆಂಗಳೂರಿನಲ್ಲಿಯೂ ಕಾರ್ವಿುಕ ಇಲಾಖೆಯಿಂದ 20 ಲಕ್ಷಕ್ಕೂ ಅಧಿಕ ಮಂದಿಗೆ ಕಿಟ್ ವಿತರಣೆ ಮತ್ತು ಆಹಾರ ಸರಬರಾಜು ಮಾಡಲಾಗಿದೆ ಎಂದು ಹೇಳಿಕೊಂಡಿದೆ. ಹೀಗಿದ್ದಾಗ್ಯೂ, ಪಾಲಿಕೆಯಿಂದ ಆಹಾರ ಮತ್ತು ದಿನಸಿ ಕಿಟ್ ವಿತರಣೆಗೆ 2.23 ಕೋಟಿ ಖರ್ಚು ಆಗಿರುವ ಬಗ್ಗೆ ಅನುಮಾನ ವ್ಯಕ್ತವಾಗುತ್ತಿದೆ.

ಒಂದೇ ಕಿಟ್ 3 ವಿಭಾಗದಿಂದ ಬಿಲ್!

ಲಾಕ್​ಡೌನ್ ವೇಳೆ ಶಾಸಕರ ನಿಧಿಯಿಂದ ಸರ್ಕಾರ, ಕಾರ್ವಿುಕ ಇಲಾಖೆ ಹಾಗೂ ಪಾಲಿಕೆ ವ್ಯಾಪ್ತಿಯಲ್ಲಿ ಬಿಬಿಎಂಪಿ ವತಿಯಿಂದ ಕಟ್ಟಡ ಮತ್ತು ವಲಸೆ ಕಾರ್ವಿುಕರು, ನಿರ್ಗತಿಕರಿಗೆ ಆಹಾರ ಪೊಟ್ಟಣ ಪೂರೈಕೆ ಮತ್ತು ದಿನಸಿ ಕಿಟ್ ವಿತರಣೆ ಮಾಡಿದ್ದೇವೆ ಎಂದು ಹೇಳಲಾಗುತ್ತಿದೆ. ಒಂದೇ ಕಿಟ್​ಗೆ 3 ವಿಭಾಗದಿಂದ ಬಿಲ್ ಮಾಡಲಾಗಿದೆ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ದಿನಸಿ ಕಿಟ್​ನಲ್ಲಿ ಕೋಟ್ಯಂತರ ರೂ. ಹಗರಣ ನಡೆದಿದ್ದು, ಈ ಬಗ್ಗೆ ಸಮಗ್ರವಾಗಿ ನ್ಯಾಯಾಂಗ ತನಿಖೆಯಾಗಬೇಕು. ಆಗ ಮಾತ್ರ ತಪ್ಪಿತಸ್ಥರು ಯಾರೆಂಬುದು ತಿಳಿಯಲಿದೆ - | ಅಬ್ದುಲ್ ವಾಜಿದ್, ಮಾಜಿ ಕಾಪೋರೇಟರ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net