ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಕಡ್ಡಾಯ

Corona virs
Published on

ಮಂಗಳೂರು: ಪದವಿ ಕಾಲೇಜುಗಳು ನ.17ರಿಂದ ಪ್ರಾರಂಭವಾಗಲಿದ್ದು ಪ್ರತಿಯೊಬ್ಬ ವಿದ್ಯಾರ್ಥಿಯೂ ಕಡ್ಡಾಯವಾಗಿ ಕೋವಿಡ್ ಪರೀಕ್ಷೆ ಮಾಡಿಸಿಕೊಂಡು ಅದರ ಪ್ರಮಾಣಪತ್ರದೊಂದಿಗೆ ಹಾಜರಾಗಬೇಕು ಎಂದು ದ.ಕ.ಜಿಲ್ಲಾಡಳಿತ ತಿಳಿಸಿದೆ.

ವಿದ್ಯಾರ್ಥಿಗಳು ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ, ತಾಲೂಕು ಆರೋಗ್ಯ ಕೇಂದ್ರಗಳಲ್ಲಿ ಕೋವಿಡ್ ಪರೀಕ್ಷೆ ಮಾಡಿಸಿ ಕೊಳ್ಳಬಹುದು. ಈಗಾಗಲೇ ಕೋವಿಡ್ ಟೆಸ್ಟ್ ಮ್ಯಾಪಿಂಗ್ ಮಾಡಿ ಕಾಲೇಜುಗಳೊಂದಿಗೆ ಲಿಂಕ್ ಮಾಡಿಕೊಳ್ಳಲಾಗಿದೆ. ಕೋವಿಡ್ ಪರೀಕ್ಷಾ ಪ್ರಮಾಣಪತ್ರ ಇಲ್ಲದಿರುವ ವಿದ್ಯಾರ್ಥಿಗಳಿಗೆ ಪ್ರವೇಶವಿಲ್ಲ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

48 ಕರೊನಾ ಪ್ರಕರಣ: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾನುವಾರ 34 ಹೊಸ ಕರೊನಾ ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ. ಇದೇ ದಿನ ವಿವಿಧ ಆಸ್ಪತ್ರೆ ಹಾಗೂ ಮನೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 86 ಮಂದಿ ಗುಣವಾಗಿದ್ದಾರೆ.

ಜಿಲ್ಲೆಯಲ್ಲಿ ಇಲ್ಲಿಯ ತನಕ ದಾಖಲಾದ ಒಟ್ಟು ಕರೊನಾ ಪಾಸಿಟಿವ್ ಪ್ರಕರಣಗಳು 31,259. ಗುಣವಾದವರ ಸಂಖ್ಯೆ 29,800. ಒಟ್ಟು ಸಕ್ರಿಯ ಪ್ರಕರಣಗಳು 766. ಈವರೆಗೆ ಜಿಲ್ಲೆಯಲ್ಲಿ 12,971 ಮಾಸ್ಕ್ ಉಲ್ಲಂಘನೆ ಪ್ರಕರಣಗಳು ದಾಖಲಾಗಿದ್ದು, 14,05,632ರೂ. ದಂಡ ವಿಧಿಸಲಾಗಿದೆ.

ಉಡುಪಿ ಜಿಲ್ಲೆಯಲ್ಲಿ ಭಾನುವಾರ 14 ಮಂದಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದ್ದು, ಜುಲೈ ನಂತರ ಇದೇ ಮೊದಲ ಬಾರಿಗೆ ಕನಿಷ್ಠ ಮಂದಿಯಲ್ಲಿ ಕರೊನಾ ಕಾಣಿಸಿಕೊಂಡಿದೆ. 4 ಮಂದಿ ರೋಗಲಕ್ಷಣ ಹೊಂದಿದ್ದು, 10 ಮಂದಿಯಲ್ಲಿ ಲಕ್ಷಣಗಳಿಲ್ಲ. ಕೋವಿಡ್ ಕೇರ್ ಸೆಂಟರ್‌ನಲ್ಲಿ 1 ಮಂದಿಗೆ, ಹೋಂ ಐಸೋಲೇಶನ್‌ನಲ್ಲಿ 13 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ. 2109 ಮಂದಿ ವರದಿ ನೆಗೆಟಿವ್ ಬಂದಿದೆ. 56 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಜಿಲ್ಲೆಯಲ್ಲಿ ಒಟ್ಟು 240 ಸಕ್ರಿಯ ಪ್ರಕರಣಗಳಿವೆ.

ಕಾಸರಗೋಡು ಜಿಲ್ಲೆಯ 62 ಮಂದಿ ಸಹಿತ ಕೇರಳದಲ್ಲಿ ಭಾನುವಾರ 4,581 ಮಂದಿಯಲ್ಲಿ ಕೋವಿಡ್-19 ಕಾಣಿಸಿಕೊಂಡಿದೆ. ರಾಜ್ಯದಲ್ಲಿ ಕೋವಿಡ್-19ನಿಂದ ಭಾನುವಾರ 21 ಮಂದಿ ಮೃತಪಟ್ಟಿದ್ದು, ಈ ಮೂಲಕ ಕೋವಿಡ್‌ಗೆ ಬಲಿಯಾದವರ ಸಂಖ್ಯೆ 1,869ಕ್ಕೇರಿದೆ. ಭಾನುವಾರ ರಾಜ್ಯದಲ್ಲಿ ಆರೋಗ್ಯ ಇಲಾಖೆ 49 ಸಿಬ್ಬಂದಿಗೆ ಸಂಪರ್ಕದಿಂದ ರೋಗ ಬಾಧಿಸಿದೆ. ಕೋವಿಡ್ ಬಾಧಿಸಿ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆಯ ಪಡೆಯುತ್ತಿರುವವರಲ್ಲಿ ಕಾಸರಗೋಡು ಜಿಲ್ಲೆಯ 117 ಮಂದಿ ಸೇರಿ ರಾಜ್ಯದ 6,684 ಮಂದಿ ಗುಣವಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net