ದ.ಕ., ಉಡುಪಿಯಲ್ಲಿಲ್ಲ ಕರೊನಾ ಪ್ರಕರಣ

corona
Published on

ಮಂಗಳೂರು/ಉಡುಪಿ: ಕೋವಿಡ್ ಸೋಂಕಿತರಾಗಿದ್ದ ಬಂಟ್ವಾಳದ ಯುವತಿ ಗುಣಮುಖರಾಗಿ ಸೋಮವಾರ ಮನೆಗೆ ತೆರಳಿದ್ದಾರೆ. ಏ.30ರಂದು ಸಾವನ್ನಪ್ಪಿದ್ದ ಬಂಟ್ವಾಳ ಕಸ್ಬಾದ ವೃದ್ಧೆಯ(ಪಿ-409) ಪುತ್ರಿ(ಪಿ-489) ಗುಣಮುಖರಾದವರು.

ಸೋಮವಾರ ಜಿಲ್ಲೆಯಲ್ಲಿ ಹೊಸ ಕರೊನಾ ಪ್ರಕರಣ ವರದಿಯಾಗಿಲ್ಲ. ಪ್ರಸ್ತುತ 14 ಕೋವಿಡ್ ರೋಗಿಗಳು ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು 12 ಮಂದಿಯ ಸ್ಥಿತಿ ತೃಪ್ತಿಕರವಾಗಿದೆ.

ಕುಲಶೇಖರ ನಿವಾಸಿ 80ರ ವೃದ್ಧೆ(ಪಿ-507) ಅಧಿಕ ರಕ್ತದೊತ್ತಡ ಹಾಗೂ ಪಾರ್ಶ್ವವಾಯುವಿನಿಂದ ಬಳಲುತ್ತಿದ್ದು ಆರೋಗ್ಯ ಸ್ಥಿತಿ ಸೂಕ್ಷ್ಮವಾಗಿದೆ. ಬೋಳೂರು ನಿವಾಸಿ 58 ವರ್ಷದ ಮಹಿಳೆ(ಪಿ-536) ಮಿದುಳಿನ ಸೋಂಕಿನಿಂದ ಬಳಲುತ್ತಿದ್ದು ಐಸಿಯುನಲ್ಲಿ ವೆಂಟಿಲೇಟರ್ ಅಳವಡಿಸಿ ಚಿಕಿತ್ಸೆ ನೀಡಲಾಗುತ್ತಿದೆ, ಅವರ ಸ್ಥಿತಿ ಗಂಭೀರ ಎಂದು ವೆನ್ಲಾಕ್ ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

ಸೋಮವಾರ 1151 ವಲಸೆ ಕಾರ್ಮಿಕರನ್ನು ಉತ್ತರ ಪ್ರದೇಶಕ್ಕೆ ರೈಲು ಮೂಲಕ ಕಳುಹಿಸಿಕೊಡಲಾಗಿದೆ. ಒಟ್ಟು 48 ಮಂದಿಯ ಸ್ಕ್ರೀನಿಂಗ್ ನಡೆಸಲಾಗಿದ್ದು 20 ಮಂದಿ ಎನ್‌ಐಟಿಕೆಯಲ್ಲಿ, 24 ಮಂದಿ ಇಎಸ್‌ಐ ಆಸ್ಪತ್ರೆಯಲ್ಲಿ ನಿಗಾವಣೆಯಲ್ಲಿದ್ದಾರೆ. 28 ಮಂದಿಯನ್ನು ಗೃಹ ನಿಗಾವಣೆಗೆ ಕಳುಹಿಸಲಾಗಿದೆ. ಸಿಕ್ಕಿರುವ ಎಲ್ಲ 124 ಸ್ಯಾಂಪಲ್ ವರದಿಗಳೂ ನೆಗೆಟಿವ್ ಆಗಿವೆ. 68 ಸ್ಯಾಂಪಲ್ ಸೋಮವಾರ ಕಳುಹಿಸಿದ್ದು ಒಟ್ಟು 128 ಸ್ಯಾಂಪಲ್ ವರದಿಗಳು ಇನ್ನಷ್ಟೇ ಬರಬೇಕಿವೆ. ಕರೊನಾ ಶಂಕಿತ 122 ಮಂದಿಯ ಮಾದರಿ ವರದಿ ನೆಗೆಟಿವ್ ಬಂದಿದ್ದು, 151 ವರದಿ ಬರಲು ಬಾಕಿ ಇದೆ.

ಕಾಸರಗೋಡಿನಲ್ಲಿ ಮತ್ತೆ ನಾಲ್ವರಲ್ಲಿ ಸೋಂಕು

ಕಾಸರಗೋಡು: ಕೋವಿಡ್-19 ವೈರಸ್‌ಮುಕ್ತ ಜಿಲ್ಲೆಯಾಗಿ ಘೋಷಣೆಯಾದ ಬೆನ್ನಿಗೆ ಕಾಸರಗೋಡು ಜಿಲ್ಲೆಯ ನಾಲ್ಕು ಮಂದಿಯಲ್ಲಿ ಸೋಂಕು ಕಾಣಿಸಿಕೊಳ್ಳುವ ಮೂಲಕ ಮತ್ತೆ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಕಾಸರಗೋಡಿನ ನಾಲ್ಕೂ ಮಂದಿ ಮಹಾರಾಷ್ಟ್ರದಿಂದ ಜಿಲ್ಲೆಗೆ ಬಂದವರು. ಕೇರಳದಲ್ಲಿ ಒಟ್ಟು ಏಳು ಮಂದಿಯಲ್ಲಿ ವೈರಸ್ ಕಾಣಿಸಿಕೊಂಡಿದೆ. ಕಾಸರಗೋಡು ಜಿಲ್ಲೆಯಲ್ಲಿ ಭಾನುವಾರ ಕೊನೆಯ ರೋಗಿ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುತ್ತಿದ್ದಂತೆ ಜಿಲ್ಲೆಯಲ್ಲಿ ಲಾಕ್‌ಡೌನ್ ವ್ಯವಸ್ಥೆಯೂ ಅಸ್ತವ್ಯಸ್ತಗೊಳ್ಳಲಾರಂಭಿಸಿದೆ. ಜನರು ಮುಂಜಾಗ್ರತೆಯಿಲ್ಲದೆ ಪೇಟೆಗಳಲ್ಲಿ ಸುತ್ತಾಡುತ್ತಿದ್ದು, ಪೊಲೀಸರ ಸೂಚನೆಗಳನ್ನೂ ಸಮರ್ಪಕವಾಗಿ ಪಾಲಿಸುತ್ತಿಲ್ಲ ಎಂಬ ದೂರು ವ್ಯಕ್ತಗೊಂಡಿವೆ.

ಸೋಂಕು ಮೂಲ ನಿಗೂಢ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಗೆ ಕೋವಿಡ್ ಬರಲು ಕಾರಣವೇನು? ಮೂಲ ಯಾವುದು ಎಂಬ ಬಗ್ಗೆ ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಮಚಂದ್ರ ಬಾಯರಿ ಸೋಮವಾರ ಮಧ್ಯಂತರ ವರದಿ ಮಂಡಿಸಿದ್ದಾರೆ.

ಆದರೆ ಸೋಂಕು ಮೂಲ ಪತ್ತೆ ಸಂಬಂಧ ಅಂತಿಮ ನಿರ್ಣಯಕ್ಕೆ ಬರಲು ಕೇರಳದಿಂದ ಈ ಆಸ್ಪತ್ರೆಗೆ ಬಂದ ರೋಗಿಗಳ ತಪಾಸಣಾ ವರದಿ ಬಂದ ಬಳಿಕವಷ್ಟೇ ಸಾಧ್ಯ. ಈ ಹಿನ್ನೆಲೆಯಲ್ಲಿ ವರದಿ ಮಂಡಿಸಲು ಕಾಲಾವಕಾಶದ ಅಗತ್ಯವಿದೆ ಎಂದು ಸೋಮವಾರ ನಡೆದ ಸಭೆಯಲ್ಲಿ ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಜನರಲ್ಲಿ ಇರುವ ಸಂಶಯದ ನಿವಾರಣೆ ಅಗತ್ಯ ಇರುವುದರಿಂದ, ಸೋಂಕು ಮೂಲ ಪತ್ತೆ ಅನಿವಾರ್ಯ ಎಂದರು.

ಜಿಲ್ಲಾ ಆರೋಗ್ಯಾಧಿಕಾರಿಗಳು ಈ ಬಗ್ಗೆ ವಿವರಿಸಿ, ಬಂಟ್ವಾಳ, ಫಸ್ಟ್ ನ್ಯೂರೋ ಆಸ್ಪತ್ರೆ ಹಾಗೂ ಬೋಳೂರು ಪ್ರಕರಣಗಳಿಗೆ ಸಂಬಂಧಿಸಿದಂತೆ 1000ಕ್ಕೂ ಅಧಿಕ ಮಂದಿಯ ಸ್ಯಾಂಪಲ್ ಪರೀಕ್ಷೆ ಮಾಡಲಾಗಿದೆ. ಫಸ್ಟ್ನ್ಯೂರೋ ಆಸ್ಪತ್ರೆಯ ಸಿಬ್ಬಂದಿಯೊಬ್ಬರಿಗೆ ಪಾಸಿಟಿವ್ ಬಂದಮೇಲೆ ಅವರ ಸಂಪರ್ಕದಲ್ಲಿದ್ದ ಎಲ್ಲರನ್ನೂ ವೈದ್ಯಕೀಯ ಪರೀಕ್ಷೆಗೊಳಪಡಿಸಲಾಗಿದೆ. ಆ ಆಸ್ಪತ್ರೆಯಲ್ಲಿ ಕೇರಳ ರಾಜ್ಯದಿಂದಲೂ ಹಲವಾರು ಮಂದಿ ಒಳರೋಗಿ, ಹೊರರೋಗಿಯಾಗಿ ಚಿಕಿತ್ಸೆ ಪಡೆದು, ಬಿಡುಗಡೆಯಾಗಿ ತೆರಳಿದ್ದಾರೆ. ಅವರ ಗಂಟಲ ದ್ರವ ತಪಾಸಣೆ ಅಗತ್ಯವಾಗಿದ್ದು, ಕೇರಳ ಸರ್ಕಾರದ ಜತೆ ಸಂಪರ್ಕಿಸಿ ಈ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net