

ದಾವಣಗೆರೆ: ಕೋವಿಡ್ ಜಾಗೃತಿ ಜಾಥಾವನ್ನು ನಗರದ ಉತ್ತರ ಪೊಲೀಸ್ ವೃತ್ತ ವ್ಯಾಪ್ತಿಯಲ್ಲಿ ಸೋಮವಾರ ಹಮ್ಮಿಕೊಳ್ಳಲಾಗಿತ್ತು.
ಹೆಚ್ಚುವರಿ ಎಸ್ಪಿ ರಾಜೀವ್ ಎಂ. ನೇತೃತ್ವದಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಮದೀನಾ ಆಟೋ ನಿಲ್ದಾಣದಿಂದ ಅಖ್ತರ್ ರಜಾ ಸರ್ಕಲ್ ವರೆಗೆ ಜಾಗೃತಿ ಮೂಡಿಸಿದರು.
ಮಾಸ್ಕ್ ಧರಿಸದವರಿಗೆ ಮಾಸ್ಕ್ ನೀಡಿದರು. ಕರೊನಾ ವೈರಸ್‌ನಿಂದ ನಮ್ಮನ್ನು ನಾವು ಕಾಪಾಡಿಕೊಳ್ಳಲು ಮಾಸ್ಕ್, ಸ್ಯಾನಿಟೈಸರ್, ದೈಹಿಕ ಅಂತರ ಕಾಪಾಡಿಕೊಳ್ಳುವ ಬಗ್ಗೆ ಜನರಿಗೆ ತಿಳಿವಳಿಕೆ ಮೂಡಿಸಲಾಯಿತು. ಲಾಕ್‌ಡೌನ್ ಸಮಯದಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿದ ನಾಗರಿಕರಿಗೆ ಹೆಚ್ಚುವರಿ ಎಸ್ಪಿ ರಾಜೀವ್ ಪ್ರಶಂಸನಾ ಪತ್ರ ನೀಡಿ ಗೌರವಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ಸುರಕ್ಷತಾ ಕ್ರಮಗಳಾದ ಸ್ಯಾನಿಟೈಸರ್, ಮಾಸ್ಕ್ ಬಳಕೆ, ದೈಹಿಕ ಅಂತರ, ಶುಚಿತ್ವ ಕಾಯ್ದುಕೊಳ್ಳುವ ಮೂಲಕ ಕರೊನಾ ಮಹಾಮಾರಿ ವೈರಸ್‌ನಿಂದ ನಮ್ಮನ್ನು ರಕ್ಷಿಸಿಕೊಳ್ಳಬೇಕಾಗಿದೆ. ಆದರೆ ಈ ಬಗ್ಗೆ ಭಯ ಬೇಡ ಎಂದರು. ನಗರ ಡಿವೈಎಸ್ಪಿ ನಾಗೇಶ್ ಐತಾಳ್, ಸಿಪಿಐ ಗಜೇಂದ್ರಪ್ಪ, ಪಿಎಸ್‌ಐಗಳಾದ ನಾಗರಾಜ, ಶೈಲಜಾ, ಲಲಿತಮ್ಮ, ಮುಖಂಡರಾದ ಅಮಾನುಲ್ಲಾ ಖಾನ್, ಸಿರಾಜ್, ಸಾದಿಕ್ ಪೈಲ್ವಾನ್ ಭಾಗವಹಿಸಿದ್ದರು.