

ಬೇಲೂರು : ಪಟ್ಟಣದ ಕೆರೆ ಬೀದಿ ರಸ್ತೆಯಲ್ಲಿ ಗುಂಡಿ ಬಿದ್ದು ತಿಂಗಳೂ ಕಳೆದರೂ ಪುರಸಭೆ ಅಧಿಕಾರಿಗಳು ಅಥವಾ ಸಿಬ್ಬಂದಿ ಗಮನಹರಿಸದ ಕಾರಣ ವಾಹನಗಳ ಸಂಚಾರಕ್ಕೆ ಅಡಚಣೆಯಾಗಿದ್ದು, ಶೀಘ್ರವೇ ಗುಂಡಿ ಮುಚ್ಚುವಂತೆ ಸ್ಥಳೀಯ ನಿವಾಸಿಗರು ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಪಟ್ಟಣದ 10 ನೇ ವಾರ್ಡಿನ ಕೆರೆ ಬೀದಿಯ ರಸ್ತೆ ಗುಂಡಿಯಿಂದಾಗಿ ಸಾರ್ವಜನಿಕರಿಗೆ ಸಮಸ್ಯೆಯಾಗಿದೆ. ಪ್ರತಿನಿತ್ಯ ಕೆರೆ ಬೀದಿಯ ಇದೇ ರಸ್ತೆಯಲ್ಲಿ ಹತ್ತಾರು ಗ್ರಾಮಗಳಿಗೆ ಸಾರ್ವಜನಿಕರು ವಿವಿಧ ವಾಹನಗಳಲ್ಲಿ ತೆರಳುತ್ತಾರೆ. ಅಲ್ಲದೆ ಶ್ರೀ ಚನ್ನಕೇಶವಸ್ವಾಮಿ ದೇಗುಲಕ್ಕೆ ಬರುವ ಭಕ್ತರು ದೇವರಿಗೆ ಹರಕೆ, ಮುಡಿಪುಗಳನ್ನು ಕೊಡುವುದಕ್ಕಾಗಿ ಇದೇ ರಸ್ತೆಯ ಅಂಚಿನಲ್ಲಿರುವ ವಿಷ್ಣು ಸಮುದ್ರ ಕೆರೆಗೆ ವಿವಿಧ ಸಾಮಗ್ರಿಗಳನ್ನು ಹೊತ್ತು ತೆರಳುತ್ತಾರೆ. ಆದರೆ ಇಲ್ಲಿನ ರಸ್ತೆ ಮಧ್ಯೆಯೇ ಆಳವಾದ ಗುಂಡಿ ಬಿದ್ದು ತಿಂಗಳು ಕಳೆದರೂ ಪುರಸಭೆ ಅಧಿಕಾರಿಗಳು ರಸ್ತೆ ದುರಸ್ತಿಗೆ ಮುಂದಾಗಿಲ್ಲ.
ಗುಂಡಿ ಬಿದ್ದ ಸ್ಥಳಕ್ಕೆ ಕಲ್ಲುಗಳು ಮತ್ತು ಪೊಲೀಸ್ ಬ್ಯಾರಿಕೇಡ್ ತಂದು ಹಾಕಿದ್ದು ಬಿಟ್ಟರೆ ಗುಂಡಿ ಮುಚ್ಚುವ ಪ್ರಯತ್ನಕ್ಕೆ ಯಾರೂ ಮುಂದಾಗುತ್ತಿಲ್ಲ. ಈ ಗುಂಡಿ ಹಾಗೂ ಬ್ಯಾರಿಕೇಡ್‌ನಿಂದಾಗಿ ವಾಹನಗಳ ಸವಾರರು ಪರದಾಡುವಂತಾಗಿದೆ. ಕೆಲ ದಿನಗಳ ಹಿಂದೆ ಬೈಕ್ ಸವಾರರು ಈ ಗುಂಡಿಗೆ ಬಿದ್ದು ಗಾಯಗೊಂಡಿದ್ದಾರೆ. ಅಲ್ಲದೆ ಒಂದು ವಾಹನ ಹೋಗುವ ಸಂದರ್ಭ ಮತ್ತೊಂದು ವಾಹನ ಬಂದರೆ ಜಾಗ ಬಿಡಲು ಪರದಾಡ ಬೇಕಾಗುತ್ತದೆ. ಈ ಬಗ್ಗೆ ಸಂಬಂಧಿಸಿದ ಪುರಸಭೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಸ್ಥಳೀಯರು. ಆದ್ದರಿಂದ ತಕ್ಷಣವೇ ಅಧಿಕಾರಿಗಳು ಗುಂಡಿ ಮುಚ್ಚಿಸಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಪುರಸಭೆ ಕಚೇರಿ ಮುಂದೆ ಪ್ರತಿಭಟಸಬೇಕಾಗುತ್ತದೆ ಎಂದು ಸಾರ್ವಜನಿಕರು ಎಚ್ಚರಿಸಿದ್ದಾರೆ.
ನಮ್ಮ ಕೆರೆ ಬೀದಿಯಲ್ಲಿನ ರಸ್ತೆ ಮದ್ಯೆ ಗುಂಡಿ ಬಿದ್ದು ತಿಂಗಳು ಕಳೆಯುತ್ತಿದೆ. ಕತ್ತಲು ಸಂದರ್ಭ ಗುಂಡಿಗೆ ಬಿದ್ದು ಸಾಕಷ್ಟು ಜನರು ಗಾಯಗೊಂಡಿದ್ದಾರೆ. ನಂತರ ಯಾರೋ ಕಲ್ಲು ಮತ್ತು ಬ್ಯಾರಿಕೇಡ್ ತಂದು ನಿಲ್ಲಿಸಿದ್ದಾರೆ. ಆದರೂ ವಾಹನಗಳ ಮತ್ತು ಜನರ ಸಂಚಾರಕ್ಕೆ ಇದು ತೊಡಕಾಗಿದ್ದು, ತಕ್ಷಣವೇ ಪುರಸಭೆ ಅಧಿಕಾಇಗಳು ಗಮನ ಹರಿಸಿ ಗುಂಡಿ ಮುಂಚ್ಚಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಸ್ಥಳೀಯರು ಪುರಸಭೆ ಕಚೇರಿ ಮುಂದೆ ಪ್ರತಿಭಟಿಸಬೇಕಾಗುತ್ತದೆ.
ಮಂಜುನಾಥ್ ಉಪ್ಪಾರ್
ಸ್ಥಳೀಯ ನಿವಾಸಿ ಬೇಲೂರು