

ಹುಬ್ಬಳ್ಳಿ: ಇಲ್ಲಿಯ ಚನ್ನಪೇಟದಲ್ಲಿನ ಕರಸೇವಕ ಶ್ರೀಕಾಂತ ಪೂಜಾರ ಅವರ ಮನೆಗೆ ಶಾಸಕ ಮಹೇಶ ಟೆಂಗಿನಕಾಯಿ ಸೋಮವಾರ ಭೇಟಿ ನೀಡಿ, ಕುಟುಂಬದವರಿಗೆ ಸಾಂತ್ವನ ಹೇಳಿದರು.
ನಿಮ್ಮೊಂದಿಗೆ ನಾವಿದ್ದೇವೆ. ಪ್ರಕರಣಕ್ಕೆ ಸಂಬಂಧಿಸಿದಂತೆ ನಾವೆಲ್ಲವನ್ನೂ ನೋಡಿಕೊಳ್ಳುತ್ತೇವೆ. ನಿಮ್ಮೊಂದಿಗೆ ಹಿಂದು ಸಮಾಜವಿದೆ. ಧೈರ್ಯ ಕಳೆದುಕೊಳ್ಳಬೇಡಿ ಎಂದು ಶಾಸಕ ಟೆಂಗಿನಕಾಯಿ, ಶ್ರೀಕಾಂತ ಪೂಜಾರ ಕುಟುಂಬದವರಿಗೆ ಹೇಳಿದರು. ಕಾಂಗ್ರೆಸ್ ಸರ್ಕಾರ ಮುಸ್ಲಿಮರ ಓಲೈಕೆ ರಾಜಕಾರಣ ಮಾಡುತ್ತಿದೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ವೇಳೆ ಈ ರೀತಿಯ ವರ್ತನೆಯನ್ನು ಹಿಂದು ಸಮಾಜ ಸಹಿಸುವುದಿಲ್ಲ. ಕರಸೇವಕರನ್ನು ಜೈಲಿಗೆ ಕಳಿಸುವುದು ಸರಿಯಲ್ಲ ಎಂದು ಟೆಂಗಿನಕಾಯಿ ಕಿಡಿಯಾದರು.
ಅಂಬಿಕಾ ಶ್ರೀಕಾಂತ, ಮಂಜುನಾಥ ಪೂಜಾರ, ಸುನೀಲ ಪೂಜಾರ, ಮಾಜಿ ಮೇಯರ್ ರಾಧಾಬಾಯಿ ಸಫಾರೆ, ಸತೀಶ ಶೇಜವಾಡಕರ, ರವಿ ನಾಯಕ, ಶಿವಾನಂದ ಮುತ್ತಣ್ಣವರ, ಸುಬ್ರಹ್ಮಣ್ಯ ಶಿರಕೋಳ, ಗುರುನಾಥ ಹೇಮಕರ, ರಾಜು ಜರತಾರಘರ, ತೋಟಪ್ಪ ನಿಡಗುಂದಿ ಇತರರು ಇದ್ದರು.