

ಮಡಿಕೇರಿ: ಧರ್ಮಸ್ಥಳದಲ್ಲಿ ನಡೆದ ಸೌಜನ್ಯಳ ಅತ್ಯಾಚಾರ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಧರ್ಮಸ್ಥಳ ದೌರ್ಜನ್ಯ ವಿರೋಧಿ ವೇದಿಕೆ ವತಿಯಿಂದ ಹೆಚ್ಚುವರಿ ಜಿಲ್ಲಾಧಿಕಾರಿಗಳ ಐಶ್ವರ್ಯ ಅವರ ಮೂಲಕ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿತು.
ಸೌಜನ್ಯ ಪ್ರಕರಣ ನಡೆದು ೧೩ ವರ್ಷಗಳೇ ಕಳೆದಿದ್ದರೂ ನೈಜ ಆರೋಪಿಗಳನ್ನು ಬಂಧಿಸಲು ಆಡಳಿತ ವ್ಯವಸ್ಥೆಯಿಂದ ಸಾಧ್ಯವಾಗಿಲ್ಲ. ಆದ್ದರಿಂದ ವೇದಿಕೆ ಮೂಲಕ ರಾಜ್ಯವ್ಯಾಪಿ ನ್ಯಾಯಕ್ಕಾಗಿ ಜನಾಗ್ರಹ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಇದರ ಭಾಗವಾಗಿ ಹೆಚ್ಚುವರಿ ಜಿಲ್ಲಾಧಿಕಾರಿ ಆರ್.ಐಶ್ವರ್ಯ ಅವರ ಮೂಲಕ ಮನವಿ ಸಲ್ಲಿಸಿರುವುದಾಗಿ ವೇದಿಕೆಯ ಪ್ರಮುಖರು ಹಾಗೂ ಸಿಐಟಿಯು ಸಂಘಟನೆಯ ಜಿಲ್ಲಾಧ್ಯಕ್ಷ ಪಿ.ಆರ್.ಭರತ್ ಅವರು ತಿಳಿಸಿದರು.
ಸೌಜನ್ಯ ಪ್ರಕರಣದ ನೈಜ ಆರೋಪಿಗಳನ್ನು ಬಂಧಿಸದ ಮತ್ತು ಸೂಕ್ತ ತನಿಖೆ ನಡೆಸದ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವುದು ಸೂಕ್ತ ಎಂಬ ಆದೇಶವನ್ನು ಸರ್ಕಾರ ಪಾಲಿಸಬೇಕು. ವೈದ್ಯಕೀಯ ಅಧಿಕಾರಿಗಳು ಹಾಗೂ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ನೈಜ ಆರೋಪಿಗಳ ಬಂಧನಕ್ಕೆ ಸೂಕ್ತ ರೀತಿಯ ತನಿಖೆಗೆ ಸರ್ಕಾರ ಆದೇಶಿಸಬೇಕು. ಧರ್ಮಸ್ಥಳ ಮತ್ತು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕಳೆದ ೨೦ ವರ್ಷಗಳಲ್ಲಿ ನಡೆದಿರುವ ಅಸಹಜ ಸಾವು, ಕೊಲೆ, ನಾಪತ್ತೆ ಪ್ರಕರಣಗಳ ಜೊತೆಗೆ ರಾಜ್ಯದ ಯಾವುದೇ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ದಾಖಲಾದ ಪ್ರಕರಣಗಳ ತನಿಖೆಯನ್ನು ಎಸ್‌ಐಟಿಗೆ ಒಪ್ಪಿಸಬೇಕು. ಎಸ್‌ಐಟಿ ವಿರುದ್ಧ ಪಟ್ಟಭದ್ರ ಹಿತಾಸಕ್ತಿಗಳು ನಡೆಸುತ್ತಿರುವ ಪಿತೂರಿಯನ್ನು ನಿಲ್ಲಿಸಲು ಕ್ರಮ ಕೈಗೊಳ್ಳಬೇಕು. ಸೌಜನ್ಯ ಪ್ರಕರಣದ ಹೋರಾಟಗಾರರ ಮೇಲೆ ರಾಜ್ಯದ ಯಾವುದೇ ಠಾಣೆಯಲ್ಲಿ ದಾಖಲಾದ ಪ್ರಕರಣವನ್ನು ಸರ್ಕಾರ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಧರ್ಮಸ್ಥಳದಲ್ಲಿ ದುಡಿಯುತ್ತಿರುವ ಸ್ವಚ್ಛತಾ ಕಾರ್ಮಿಕರಿಗೆ ಕಾರ್ಮಿಕ ಕಾಯ್ದೆಯಂತೆ ವೇತನ ನೀಡಲಾಗುತ್ತಿದೆಯೇ ಎಂಬುವುದನ್ನು ಖಾತ್ರಿಪಡಿಸಬೇಕು. ಮುಂಡ್ರುಪಾಡಿಯ ದಲಿತ ಕುಟುಂಬಗಳಿಗೆ ತಲಾ ಒಂದು ಏಕರೆ ಸರ್ಕಾರಿ ಭೂಮಿ ನೀಡಬೇಕು. ಧರ್ಮಸ್ಥಳ ಹಾಗೂ ಸುತ್ತಮುತ್ತಲಿನ ಗ್ರಾಮದ ಭೂಕಬಳಿಕೆ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ಲಾಭದಾಯಕ ಶಿಕ್ಷಣ ಸಂಸ್ಥೆಗೆ ಮೀಸಲಿಟ್ಟಿರುವ ಜಮೀನನ್ನು ದಲಿತ ಸಮುದಾಯಕ್ಕೆ ನೀಡಬೇಕು. ಅರ್ಹ ಭೂರಹಿತ ಫಲಾನುಭವಿಗಳಿಗೆ ಭೂಮಿಯನ್ನು ಹಂಚಬೇಕು, ಮೈಕ್ರೊಫೈನಾನ್ಸ್‌ಗಳ ವಿರುದ್ಧ ತನಿಖೆ ನಡೆಸಬೇಕು ಎಂದು ಪಿ.ಆರ್.ಭರತ್ ಒತ್ತಾಯಿಸಿದರು.
ರೈತ ಸಂಘದ ಮುಖಂಡರಾದ ನೆರವಂಡ ಉಮೇಶ್, ಹಮೀದ್, ಜನವಾದಿ ಮಹಿಳಾ ಸಂಘಟನೆಯ ಮುಖಂಡರಾದ ಪದ್ಮಿನಿ ಶ್ರೀಧರ್, ಕಟ್ಟಡ ಕಾರ್ಮಿಕ ಸಂಘದ ಎ.ಸಿ.ಸಾಬು, ಕಾರ್ಮಿಕ ಮುಖಂಡ ಸಾಜಿ ರಮೇಶ್, ತೋಟ ಕಾರ್ಮಿಕ ಸಂಘಟನೆಯ ಮುಖಂಡ ಎಚ್.ಬಿ.ರಮೇಶ್, ಆದಿವಾಸಿ ಸಂಘಟನೆಯ ಮುಖಂಡರಾದ ಪ್ರೇಮ, ಡಿವೈಎಫ್‌ಐ ಮುಖಂಡ ಸಾಧಿಕ್ ಮನವಿ ನೀಡುವ ಸಂದರ್ಭ ಹಾಜರಿದ್ದರು.