

ವಿಜಯಪುರ: ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಧರ್ಮಸ್ಥಳದಲ್ಲಿ ಸೌಜನ್ಯ ಎಂಬ ಯುವತಿಯ ಮೇಲೆ ನಡೆದ ಅತ್ಯಾಚಾರ ಹಾಗೂ ಕೊಲೆ ಪ್ರಕರಣದಲ್ಲಿ ಈವರೆಗೂ ಯಾರನ್ನೂ ಶಿಕ್ಷಿಸಿಲ್ಲ. ಹೀಗಾಗಿ ಸೌಜನ್ಯ ಸಾವಿಗೆ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ಕೆಆರ್‌ಎಸ್ ಪಕ್ಷದಿಂದ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಪಕ್ಷದ ರಾಜ್ಯ ಸಂಘಟನಾ ಕಾರ್ಯದರ್ಶಿ ಶಿವಾನಂದ ಯಡಹಳ್ಳಿ ಹೇಳಿದರು.
2012 ಅ.9ರಂದು ನಡೆದ ಈ ಘಟನೆಯಲ್ಲಿ ಸೌಜನ್ಯ ದಾರುಣವಾಗಿ ಸಾವಿಗೀಡಾಗಿದ್ದಾಳೆ. ಆರೋಪಿತ ಸಂತೋಷ್ ರಾವ್ ಮೇಲೆ ಶಿಕ್ಷೆ ಕೈಗೊಳ್ಳಲು ಸೂಕ್ತ ಸಾಕ್ಷಾಧಾರಗಳಿಲ್ಲವೆಂದು ನ್ಯಾಯಾಲಯ ಇತ್ತೀಚೆಗೆ ಅವರನ್ನು ಆರೋಪಮುಕ್ತ ಮಾಡಿತು. ಇದಕ್ಕೆ ಪೊಲೀಸ್‌ರ ತನಿಖೆಯ ರೀತಿಯೇ ಕಾರಣ. ಇದರಿಂದ ಜನ ತೀವ್ರ ಬೇಸರಗೊಂಡಿದ್ದಾರೆ. ಅಲ್ಲದೇ, ಕೆಆರ್‌ಎಸ್ ಪಕ್ಷ ಕೂಡ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಹೋರಾಟ ಹಮ್ಮಿಕೊಂಡಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.
ಈ ಇಡೀ ಪ್ರಕರಣದ ಬಗ್ಗೆ ಬೆಳ್ತಂಗಡಿ , ಸುಳ್ಯ , ಪುತ್ತೂರು , ಮಂಗಳೂರು ಸೇರಿದಂತೆ ರಾಜ್ಯದ ಕರಾವಳಿ ಪ್ರದೇಶದಲ್ಲಿ ಮತ್ತು ರಾಜ್ಯದ ಇತರೆಡೆಯೂ ಸಂಘ ಸಂಸ್ಥೆಗಳಿಂದ ಸಾಮಾಜಿಕ ಹೋರಾಟಗಾರರಿಂದ ಪ್ರತಿಭಟನೆ ಮತ್ತು ಧರಣಿ ನಡೆಯುತ್ತಿವೆ. ಸಾಮಾಜಿಕ ಮಾಧ್ಯಮಗಳಲ್ಲಿ ಜನಸಾಮಾನ್ಯರು ನೋವು ಮತ್ತು ಆಕ್ರೋಶ ಹೊರಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸೌಜನ್ಯ ಮತ್ತು ಆಕೆಯ ಕುಟುಂಬಕ್ಕೆ ಆಗಿರುವ ಅನ್ಯಾಯಕ್ಕೆ ಈಗಲಾದರೂ ನ್ಯಾಯ ಸಿಗುವಂತಾಗಲು ಮತ್ತು ಅಪರಾಧ ಕೃತ್ಯ ಎಸಗಿದವರು ಕಾನೂನಿನ ವ್ಯಾಪ್ತಿಗೆ ಒಳಪಟ್ಟು ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಇಂತಹ ಘಟನೆಗಳು ಮರುಕಳಿಸುವುದನ್ನು ನಿರುತ್ತೇಜಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದು ಆಗ್ರಹಿಸಿ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದರು.
ಪಕ್ಷದ ಅಧ್ಯಕ್ಷ ರವಿ ಕೃಷ್ಣಾರೆಡ್ಡಿ ನೇತೃತ್ವದಲ್ಲಿ ಆ. 26ರಿಂದ ಬೆಳ್ತಂಗಡಿಯಿಂದ ಪಾದಯಾತ್ರೆ ಆರಂಭಗೊಳ್ಳಲಿದೆ. ಸೆ.7ರಂದು ಪಾದಯಾತ್ರೆ ಬೆಂಗಳೂರು ತಲುಪಲಿದ್ದು, ಸೆ.8ರಂದು ವಿಧಾನಸೌಧ ಮುಟ್ಟಲಿದೆ. ಸುಮಾರು 14 ದಿನಗಳ ಕಾಲ ನಡೆಯಲಿರುವ 330 ಕಿಲೋಮೀಟರ್‌ಗಳ ಈ ಪಾದಯಾತ್ರೆಯಲ್ಲಿ ಪಕ್ಷವು ಕರ್ನಾಟಕ ರಾಜ್ಯ ಸರ್ಕಾರಕ್ಕೆ ರಾಜ್ಯದ ಜನತೆಯ ಪರವಾಗಿ ಹಕ್ಕೊತ್ತಾಯಗಳನ್ನು ಮಂಡಿಸಲಿದೆ. ಸೌಜನ್ಯ ಹತ್ಯೆಯ ಪ್ರಕರಣವನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ತಕ್ಷಣವೇ ಮರು ತನಿಖೆ ನಡೆಸಲು ಕ್ರಮ ಕೈಗೊಳ್ಳಬೇಕು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಪೊಲೀಸ್ ತನಿಖಾ ತಂಡ ರಚಿಸಿ ಪರ್ಯಾಯವಾಗಿ ಈಗಾಗಲೇ ತನಿಖೆ ಮಾಡಿರುವ ತನಿಖಾಧಿಕಾರಿಗಳು ಸಮರ್ಪಕವಾಗಿ ಮತ್ತು ವೃತ್ತಿಪರವಾಗಿ ತನಿಖೆ ನಡೆಸಿಲ್ಲ ಎನ್ನುವ ಆರೋಪಗಳ ಹಿನ್ನೆಲೆಯಲ್ಲಿ ಅವರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಆಗ್ರಹಿಸಲಾಗುವುದೆಂದರು.
ಜಿಲ್ಲಾಧ್ಯಕ್ಷ ಅಶೋಕ ಜಾಧವ, ಪುಂಡಲೀಕ ಬಿರಾದಾರ, ಮಾಂತೇಶ ಮರಗುರ, ಹಮೀದ ಇನಾಮದಾರ, ವಿಕ್ರಮ ವಾಘಮೋರೆ, ಪ್ರವೀಣ ರಾಯಗೊಂಡ, ದೀಪಾ ಮನೂರ, ಸುರೇಂದ್ರ ಕುನಸಲೆ, ಭೀಮಾಶಂಕರ ಕಾಂಬಳೆ ಮತ್ತಿತರರಿದ್ದರು.