ಮಂಡ್ಯ: ಜಿಲ್ಲೆಯ ನ್ಯಾಯಾಲಯಗಳಲ್ಲಿರುವ ವ್ಯಾಜ್ಯಗಳನ್ನ ತ್ವರಿತವಾಗಿ ವಿಲೇವಾರಿ ಮಾಡುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಪ್ರಸನ್ನ ಬಿ.ವರಾಳೆ ಕಿವಿಮಾತು ಹೇಳಿದರು.
ನಗರದ ಹೊರವಲಯದ ಮನುಗನಹಳ್ಳಿಯಲ್ಲಿ ನಿರ್ಮಾಣವಾಗುತ್ತಿರುವ ನ್ಯಾಯಾಂಗ ಇಲಾಖೆ ಅಧಿಕಾರಿಗಳ ವಸತಿ ಸಂಕೀರ್ಣ ನಿರ್ಮಾಣ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ನ್ಯಾಯಾಲಯದ ಎದುರು ಬರುವ ವ್ಯಾಜ್ಯಗಳನ್ನು ವಿಲೇವಾರಿ ಮಾಡಲು ವಕೀಲರು ಮತ್ತು ಕಾನೂನು ಸೇವಾ ಪ್ರಾಧಿಕಾರ ಶ್ರಮಿಸುತ್ತಿದೆ ಎಂದರು.
ಕೋವಿಡ್‌ನಂತಹ ಸಂದರ್ಭದಲ್ಲೂ ಕರ್ನಾಟಕ ರಾಜ್ಯದಲ್ಲಿ ನ್ಯಾಯಾಲಯಗಳು ವರ್ಚ್ಯುವಲ್ ವಿಧದಲ್ಲಿ ಕಾರ್ಯನಿರ್ವಹಿಸಿತು. ಅದು ಶ್ಲಾಘನೀಯ ಎಂದರು. ನ್ಯಾಯಾಧೀಶರು ಹಾಗೂ ನ್ಯಾಯಾಲಯದಲ್ಲಿ ಕೆಲಸ ಮಾಡುವ ಅಧಿಕಾರಿ ಹಾಗೂ ಸಿಬ್ಬಂದಿಗೆ ಕೆಲಸದ ಒತ್ತಡ ಹೆಚ್ಚು. ಆದರೂ ಸಹ ಕೆಲಸ ನಿರ್ವಹಣೆಯಲ್ಲಿ ಹಿಂದೆ ಸರಿಯುವಂತಿಲ್ಲ. ಒತ್ತಡದ ನಡುವೆಯೋ ಉತ್ತಮ ರೀತಿಯಲ್ಲಿ ಕೆಲಸ ಮಾಡುವುದನ್ನು ರೂಡಿಸಿಕೊಳ್ಳಬೇಕು. ಮಂಡ್ಯ ಜಿಲ್ಲೆ ಅಕ್ಕರೆಯ ಬೀಡು. ಸಕ್ಕರೆನಾಡು ಎಂದು ದೇಶದಲ್ಲಿಯೇ ಪ್ರಖ್ಯಾತಿ ಹೊಂದಿದೆ. ಹಾಗಾಗಿ ನನಗೆ ಮಂಡ್ಯಕ್ಕೆ ಬರುವುದಕ್ಕೆ ಬಹಳ ಖುಷಿಯಾಗುತ್ತದೆ ಎಂದರು.
ಜಿಲ್ಲಾ ಆಡಳಿತಾತ್ಮಕ ನ್ಯಾಯಾಧೀಶ ಎಚ್.ಬಿ.ಪ್ರಭಾಕರ್‌ಶಾಸ್ತ್ರಿ ಮಾತನಾಡಿ, ನ್ಯಾಯಾಂಗ ಇಲಾಖೆಗೆ ಸರ್ಕಾರದಿಂದ ಮತ್ತು ಸಮಾಜದಿಂದ ಹಲವು ಸೌಲಭ್ಯಗಳು ದೊರಕುತ್ತಿದೆ. ಅದರ ಋಣ ತೀರಿಸಲು ನಾವು ಬದ್ಧತೆಯಿಂದ ಕೆಲಸ ಮಾಡಬೇಕೀದೆ. ಕಕ್ಷಿದಾರರಿಗೆ ನ್ಯಾಯ ಒದಗಿಸುವ ಪ್ರಕ್ರಿಯೆಯಲ್ಲಿ ನ್ಯಾಯಾಧೀಶರ ಪಾತ್ರ ಎಷ್ಟು ಮುಖ್ಯವೋ, ವಕೀಲರ ಪಾತ್ರವು ಅಷ್ಟೇ ಪ್ರಮುಖ ಎಂದು ಪ್ರತಿಪಾದಿಸಿದರು.
ಹೈಕೋರ್ಟ್ ನ್ಯಾಯಾಮೂರ್ತಿಗಳಾದ ಬಿ.ಎಂ ಶ್ಯಾಂಪ್ರಸಾದ್, ಇ.ಎಸ್.ಇಂದ್ರೇಶ್, ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಧೀಶೆ ಬಿ.ಜಿ.ರಮಾ, ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ, ಜಿಲ್ಲಾ ಪಂಚಾಯಿತಿ ಸಿಇಒ ಶಾಂತಾ ಎಲ್.ಹುಲ್ಮನಿ, ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ ಇತರರಿದ್ದರು.