

ದೇವದುರ್ಗ: ಪಟ್ಟಣದ ಉಪಕಾರಾಗೃಹದ ಗೋಡೆ ಹಾರಿ ಇತ್ತೀಚೆಗೆ ಪರಾರಿಯಾಗಿದ್ದ ಕೊಲೆ ಆರೋಪಿ ಅನ್ವರ್ ಪಾಷಾ ಖಾಜಾಹುಸೇನ್‌ನನ್ನು ಪೊಲೀಸರು ಕೋರ್ಟ್ ಹಾಲ್‌ನಲ್ಲಿ ಶುಕ್ರವಾರ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ತಾಲೂಕಿನ ಮಸಿಹಾಳದ ವ್ಯಕ್ತಿಯೊಬ್ಬರ ಕೊಲೆ ಆರೋಪದಡಿ ಬಂಧನಕ್ಕೆ ಒಳಗಾಗಿದ್ದ ಅನ್ವರ್ ಪಾಷಾನನ್ನು ಇಲ್ಲಿನ ಉಪಕಾರಾಗೃಹದಲ್ಲಿ ಇರಿಸಲಾಗಿತ್ತು. ಸೆ.3ರ ಬೆಳಗ್ಗೆ 7ಕ್ಕೆ ಜೈಲು ಸಿಬ್ಬಂದಿ ಕಣ್ಣುತಪ್ಪಿಸಿ ಗೋಡೆಹಾರಿ ಪರಾರಿಯಾಗಿದ್ದನು. ಈ ಕುರಿತು ಪಟ್ಟಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು, ಆರೋಪಿ ಪರ ವಕೀಲರು, ಮನೆಯವರಿಗೆ ಮಾಹಿತಿ ನೀಡಿ ಹುಡುಕಾಟ ನಡೆಸಿದ್ದರು.
ಪ್ರಕರಣವೊಂದರಲ್ಲಿ ಆರೋಪಿಯಾಗಿದ್ದ ಅನ್ವರ್ ಪಾಷಾ, ಇಲ್ಲಿನ ಕೋರ್ಟ್‌ಗೆ ವಿಚಾರಣೆಗೆ ಬಂದಿದ್ದ. ಈತನ ಮೇಲೆ ಕಣ್ಣಿಟ್ಟಿದ್ದ ಸ್ಥಳೀಯ ಪೊಲೀಸರು, ಪರಾರಿಯಾದ ಕೇಸ್‌ನ ಪ್ರತಿಯನ್ನು ವಿಚಾರಣೆ ನಡೆಸುತ್ತಿದ್ದ ನ್ಯಾಯಾಧೀಶರಿಗೆ ನೀಡಿ ಆರೋಪಿ ಬಂಧನಕ್ಕೆ ಅನುಮತಿ ಪಡೆದಿದ್ದರು.
ಬೆಳಗ್ಗೆ ವಿಚಾರಣೆಗೆ ಹಾಜರಾಗಿದ್ದ ವೇಳೆ ಕೋರ್ಟ್‌ನಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆರೋಪಿ ಬಂಧಿಸುವಲ್ಲಿ ಪಿಐ ಕೆ.ಹೊಸಕೇರಪ್ಪ ಹಾಗೂ ಗಬ್ಬೂರು ಠಾಣೆ ಪಿಎಸ್‌ಐ ಗಂಗಪ್ಪ ಬುರ್ಲಿ ಯಶಸ್ವಿಯಾಗಿದ್ದಾರೆ.