ಆದಿಲ್‌ನನ್ನು ಪೊಲೀಸರ ವಶಕ್ಕೆ ನೀಡಿದ ನ್ಯಾಯಾಲಯ

IMG-20230222-WA0009
Published on

ಮೈಸೂರು: ಮದುವೆಯಾಗುವುದಾಗಿ ಇರಾನ್ ಯುವತಿಯನ್ನು ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಾಖಿ ಸಾವಂತ್ ಪತಿ ಆದಿಲ್ ಖಾನ್ ದುರಾನಿಯನ್ನು ಫೆ.27 ರವರೆಗೆ ಪೊಲೀಸ್ ವಶಕ್ಕೆ ನೀಡಿ ಮೈಸೂರು ಜಿಲ್ಲಾ ನ್ಯಾಯಾಲಯ ಆದೇಶಿಸಿದೆ.
ಆದಿಲ್ ಖಾನ್ ದುರಾನಿಯನ್ನು ಪೊಲೀಸರು ಬುಧವಾರ ಕೋರ್ಟ್‌ಗೆ ಹಾಜರುಪಡಿಸಿದ್ದರು. ವಶಕ್ಕೆ ಪಡೆದಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

ಏನಿದು ಪ್ರಕರಣ?: ವಿದ್ಯಾಭ್ಯಾಸಕ್ಕೆಂದು ನಗರದ ಖಾಸಗಿ ಫಾರ್ಮಸಿ ಕಾಲೇಜಿಗೆ ಬಂದಿರುವ ಇರಾನ್ ದೇಶದ 30 ವರ್ಷದ ಯುವತಿ, ಆದಿಲ್ ಖಾನ್ ದುರಾನಿ ವಿರುದ್ಧ ದೂರು ದಾಖಲಿಸಿದ್ದಾಳೆ. ಆದಿಲ್ ಮದುವೆಯಾಗುವುದಾಗಿ ನನ್ನನ್ನು ನಂಬಿಸಿ ಲೈಂಗಿಕ ದೌರ್ಜನ್ಯ ನಡೆಸಿದ್ದಾರೆಂದು ಆರೋಪಿಸಿದ್ದಾಳೆ.
ನನ್ನನ್ನು ಪರಿಚಯ ಮಾಡಿಕೊಂಡಿದ್ದ ಆತ ಪ್ರೀತಿಸುತ್ತಿರುವುದಾಗಿ ಹೇಳಿದ್ದ. ಬಳಿಕ ಮದುವೆಯಾಗುವುದಾಗಿ ನಂಬಿಸಿ ವಿ.ವಿ.ಪುರಂನಲ್ಲಿ ತಾನು ಉಳಿದುಕೊಂಡಿದ್ದ ಅಪಾರ್ಟ್‌ಮೆಂಟ್‌ನ ಪ್ಲಾಟ್‌ನಲ್ಲಿ ಇರಿಸಿಕೊಂಡು ಹಲವು ಬಾರಿ ನನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಮದುವೆ ಆಗುವಂತೆ ಕಳೆದ ಐದು ತಿಂಗಳಿನಿಂದ ಒತ್ತಾಯ ಮಾಡಿದಾಗ ಅವಾಚ್ಯ ಪದಗಳಿಂದ ನಿಂದಿಸುವುದಲ್ಲದೇ ಖಾಸಗಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾಳೆ.
ಇರಾನಿ ಯುವತಿ ನೀಡಿದ ದೂರಿನ ಮೇರೆಗೆ ಆದಿಲ್ ಖಾನ್ ದುರಾನಿ ವಿರುದ್ಧ ಐಪಿಸಿ ಕಲಂ 376, 417, 420, 504, 506 ಅನ್ವಯ ವಿ.ವಿ. ಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ನ್ಯಾಯಾಲಯ ಆವರಣಕ್ಕೆ ಬಂದಿದ್ದ ರಾಖಿ ಸಾವಂತ್!
ತನ್ನ ಪತಿಯ ಪ್ರಕರಣದ ವಿಚಾರಣೆ ವೇಳೆ ನಟಿ ರಾಖಿ ಸಾವಂತ್ ಕೂಡ ನ್ಯಾಯಾಲಯ ಆವರಣದಲ್ಲಿ ಹಾಜರಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆದಿಲ್ ಖಾನ್ ದುರಾನಿಯನ್ನು ನಾನು ಕಾನೂನುಬದ್ಧವಾಗಿ ಮದುವೆಯಾಗಿದ್ದೇನೆ. ಹಿಂದು ಆಗಿದ್ದವಳು ಅವನಿಗೋಸ್ಕರ ಮುಸ್ಲಿಂ ಧರ್ಮಕ್ಕೂ ಸೇರಿಕೊಂಡಿದ್ದೇನೆ. ಫಾತಿಮಾ ಅಂತ ಹೆಸರನ್ನೂ ಬದಲಿಸಿಕೊಂಡಿದ್ದೇನೆ ಎಂದರು.
ಸುಮಾರು 1.70 ಕೋಟಿ ರೂ.ಗಳನ್ನು ನನ್ನಿಂದ ಪಡೆದು ಈಗ ಆ ಹಣವನ್ನೂ ಕೊಡುತ್ತಿಲ್ಲ. ನನ್ನನ್ನು ಅವರ ಮನೆಯವರು ಸೇರಿಸುತ್ತಿಲ್ಲ. ನಾನು ಎಲ್ಲಿಗೆ ಹೋಗಲಿ? ನನಗೆ ನ್ಯಾಯ ಕೊಡಿಸಿಕೊಡಿ ಎಂದು ಮಾಧ್ಯಮಗಳ ಮುಂದೆ ಕಣ್ಣೀರು ಹಾಕಿದರು. ನ್ಯಾಯಾಲಯ ಅವರನ್ನು ಪೊಲೀಸರ ವಶಕ್ಕೆ ನೀಡಿ ಆದೇಶಿಸಿದೆ. ನನಗೆ ನ್ಯಾಯ ಬೇಕು ಎಂದು ಒತ್ತಾಯಿಸಿದರು.

ಪತಿ ವಿರುದ್ಧ ಆಕ್ರೋಶ
ನಾನು ಹಿಂದು ಎಂಬ ಕಾರಣಕ್ಕೆ ಒಪ್ಪುತ್ತಿಲ್ಲ
ಆತನಿಗೆ ಯಾವುದೇ ಕಾರಣಕ್ಕೂ ಜಾಮೀನು ಸಿಗಬಾರದು. ಆತ ಕಾನೂನುಬದ್ಧವಾಗಿ ಮದುವೆಯಾಗಿದ್ದಾನೆ. ಆದರ ಎಲ್ಲ ದಾಖಲಾತಿ ನನ್ನ ಬಳಿ ಇದೆ. ನಾನು ಇಂದು ಬೆಳಗ್ಗೆ ಆದಿಲ್ ಖಾನ್ ತಂದೆ ಜತೆ ಮಾತನಾಡಿದೆ. ನಾನು ಹಿಂದು ಎಂಬ ಕಾರಣಕ್ಕೆ ಅವರು ಸ್ವೀಕಾರ ಮಾಡುತ್ತಿಲ್ಲ. ನನ್ನ ಬಳಿ ಪಡೆದ ಹಣವನ್ನು ಹಿಂದಕ್ಕೆ ನೀಡಿಲ್ಲ. ಮೈಸೂರು ಜನ ಸರಿ ಇಲ್ಲ ಎಂದು ನನ್ನ ಬಳಿ ಹೇಳಿದ್ದ. ಇದರಿಂದ ಮುಂಬೈಗೆ ಬರುತ್ತೇನೆ ಎಂದಿದ್ದ. ನಂತರ ಮುಂಬೈನಲ್ಲಿ ಸಾಕಷ್ಟು ಬಾರಿ ನನ್ನ ಮೇಲೆ ಹಲ್ಲೆ ಮಾಡಿದ್ದ. ನ್ಯಾಯಾಲಯದ ಮೇಲೆ ವಿಶ್ವಾಸ ಇದೆ. ನನಗೆ ನ್ಯಾಯ ಸಿಗಲಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net