ಗೂಂಡಾ ಕಾಯ್ದೆ ಜಾರಿಗೆ ಕೋರ್ಟ್ ಮೆಚ್ಚುಗೆ

shashikumar
Published on

ಹುಬ್ಬಳ್ಳಿ: ನಿರಂತರ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿದ್ದವರ ಮೇಲೆ ಗೂಂಡಾ ಕಾಯ್ದೆ ಹಾಕಿದ್ದ ಹು-ಧಾ ಪೊಲೀಸ್ ಆಯುಕ್ತಾಲಯದ ಕ್ರಮಕ್ಕೆ ಹೈಕೋರ್ಟ್ ಮೆಚ್ಚಿದೆ. ಹೈಕೋರ್ಟ್ ಸಲಹಾ ಮಂಡಳಿ ಪರಿಶೀಲಿಸಿ, ನಮ್ಮ ಕ್ರಮ ಸರಿಯಾಗಿದೆ ಎಂದಿದೆ ಎಂದು ಹು-ಧಾ ಪೊಲೀಸ್ ಆಯುಕ್ತ ಎನ್. ಶಶಿಕುಮಾರ ತಿಳಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಾಗರ ಲಕ್ಕುಂಡಿ, ಲಕ್ಷ್ಮಣ ಅಲಿಯಾಸ್ ಗಭ್ಯಾ ಬಳ್ಳಾರಿ, ಮಂಜುನಾಥ ಭಂಡಾರಿ ಅಲಿಯಾಸ್ ಸೈಂಟಿಸ್ಟ್ ಮಂಜ, ದಾವೂದ ನದಾಫ್ ವಿರುದ್ಧ ಗುಂಡಾ ಕಾಯ್ದೆ ಜಾರಿ ಮಾಡಿದ್ದೇವೆ. ಇವರನ್ನು ಒಂದು ವರ್ಷದವರೆಗೆ ನ್ಯಾಯಾಂಗ ಬಂಧನದಲ್ಲಿಡಲಾಗುತ್ತದೆ. ಇವರ ಜತೆಗೆ ಸಂಪರ್ಕದಲ್ಲಿರುವವರ ಮೇಲೂ ನಿಗಾ ಇಡಲಾಗುವುದು ಎಂದರು.

ಈಗಾಗಲೇ 700ಕ್ಕೂ ಹೆಚ್ಚು ರೌಡಿಗಳ ಮೇಲೆ ಕ್ರಮ ಜರುಗಿಸಲಾಗಿದೆ. ಕಾಲಕಾಲಕ್ಕೆ ರೌಡಿಗಳ ಚಲನವಲನದ ಮೇಲೆ ನಿಗಾ ಇಡಲಾಗಿದೆ. ಅಹಿತಕರ ಘಟನೆಗಳಲ್ಲಿ ಭಾಗಿಯಾಗದಂತೆ ಕ್ರಮ ಕೈಗೊಂಡಿದ್ದೇವೆ. ಈ ವರ್ಷ 83 ಜನರನ್ನು ಗಡಿಪಾರು ಮಾಡಿದ್ದು, ನಾಲ್ವರ ಮೇಲೆ ಗುಂಡಾ ಕಾಯ್ದೆ ಹಾಕಲಾಗಿದೆ ಎಂದರು.

ಮಾದಕ ವಸ್ತುಗಳ ಮಾರಾಟದಲ್ಲಿ ತೊಡಗಿದ್ದ 18 ಜನರನ್ನು ಗಡಿಪಾರು ಆದೇಶ ಮಾಡಲಾಗಿದೆ. ಬೇರೆ ಬೇರೆ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದವರನ್ನೂ ಗಡಿಪಾರು ಮಾಡಲು ನಿರ್ಧರಿಸಿದ್ದೇವೆ. 370ಕ್ಕೂ ಹೆಚ್ಚು ಜನರ ಮೇಲಿದ್ದ ರೌಡಿಶೀಟರ್‌ಗಳನ್ನು ಪಟ್ಟಿಯಿಂದ ಕೈಬಿಡಲಾಗಿದೆ. 100 ಜನರ ಮೇಲೆ ರೌಡಿಶೀಟರ್ ಓಪನ್ ಮಾಡಿದ್ದೇವೆ ಎಂದು ವಿವರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net