ಕಸಾಪ ಗುದ್ದಾಟಕ್ಕೆ ತಾತ್ಕಾಲಿಕ ವಿರಾಮ: ನೂತನ ಕಾರ್ಯಕಾರಿ ಮಂಡಳಿ ರಚನೆಗೆ ತಡೆಯಾಜ್ಞೆ

Court orders stay on formation of new executive board Mandya
Published on

ಮಂಡ್ಯ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ನೂತನ ಅಧ್ಯಕ್ಷ ಸೇರಿದಂತೆ ಕೆಲ ಹುದ್ದೆಗೆ ಆಪ್ತರನ್ನು ನೇಮಿಸಿ ಹೊರಡಿಸಿದ ನಾಡೋಜ ಡಾ.ಮಹೇಶ ಜೋಶಿ ಆದೇಶಕ್ಕೆ ಹೈಕೋರ್ಟ್ ತಡೆಯಾಜ್ಞೆ ನೀಡಿದೆ. ಇದರೊಂದಿಗೆ ಮಹೇಶ ಜೋಶಿ ಹಾಗೂ ಜಿಲ್ಲಾಧ್ಯಕ್ಷರಾಗಿ ನಿಯೋಜನೆಗೊಂಡಿದ್ದ ಪ್ರೊ.ಎಚ್.ಎಸ್.ಮುದ್ದೇಗೌಡ ಅವರಿಗೆ ತೀವ್ರ ಹಿನ್ನಡೆಯಾಗಿದೆ.

87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಭೂತಪೂರ್ವ ಯಶಸ್ಸು ಕಂಡಿತ್ತು. ಇದಕ್ಕಾಗಿ ಹಲವರು ಹಗಲುರಾತ್ರಿ ಎನ್ನದೇ ದುಡಿದಿದ್ದರು. ಆದರೆ ನುಡಿಜಾತ್ರೆ ಮುಗಿದ ಎರಡೇ ದಿನದಲ್ಲಿ ನಾಡೋಜ ಡಾ.ಮಹೇಶ ಜೋಶಿ ಹೊಸ ಆದೇಶ ಹೊರಡಿಸಿದರು. ಅದರಂತೆ ಜಿಲ್ಲಾ ಕಸಾಪ ಸಂಚಾಲಕಿ ಡಾ.ಮೀರಾ ಶಿವಲಿಂಗಯ್ಯ ಸೇರಿದಂತೆ ಜಿಲ್ಲಾಮಟ್ಟದ ಪದಾಧಿಕಾರಿಗಳು, ತಾಲೂಕು ಹಾಗೂ ಹೋಬಳಿ ಮಟ್ಟದಲ್ಲಿ ನೇಮಕಗೊಂಡಿದ್ದವರನ್ನು ಹುದ್ದೆಯಿದ ರದ್ದುಗೊಳಿಸಿದರು. ಇದು ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಅಂತೆಯೇ ಇದರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿದ್ದವರಿಗೆ ಮೊದಲ ಜಯ ಸಿಕ್ಕಿದೆ.

ಜಿಲ್ಲಾ ಕಸಾಪ ಅಧ್ಯಕ್ಷರಾಗಿದ್ದ ಸಿ.ಕೆ.ರವಿಕುಮಾರ ಚಾಮಲಾಪುರ ಅಕಾಲಿಕ ನಿಧನದ ಬಳಿಕ ಆ ಹುದ್ದೆಗೆ ಯಾರನ್ನೂ ನೇಮಕ ಮಾಡಿರಲಿಲ್ಲ. 87ನೇ ನುಡಿಜಾತ್ರೆ ಹಿನ್ನೆಲೆಯಲ್ಲಿ ಡಾ.ಮೀರಾ ಶಿವಲಿಂಗಯ್ಯ ಅವರಿಗೆ ಜಿಲ್ಲಾ ಸಂಚಾಲಕಿಯನ್ನಾಗಿ ನಿಯೋಜಿಸಲಾಗಿತ್ತು. ಸಮ್ಮೇಳನದ ಬಳಿಕ ಡಾ.ಮೀರಾ ಶಿವಲಿಂಗಯ್ಯ ಅವರನ್ನು ಅಧಿಕಾರದಿಂದ ಬಿಡುಗಡೆ ಮಾಡುತ್ತಾರೆನ್ನುವ ಗುಮಾನಿ ಇತ್ತು. ಆದರೆ ನಾಡೋಜ ಮಹೇಶ ಜೋಶಿ ಇಷ್ಟಕ್ಕೆ ಸೀಮಿತವಾಗಲಿಲ್ಲ. ಬದಲಿಗೆ 50ಕ್ಕೂ ಹೆಚ್ಚು ಪದಾಧಿಕಾರಿಗಳಿಗೂ ಗೇಟ್‌ಪಾಸ್ ನೀಡಿದರು. ಮಾತ್ರವಲ್ಲದೆ ತಮ್ಮ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದ ಪ್ರೊ.ಎಚ್.ಎಸ್.ಮುದ್ದೇಗೌಡ ಅವರಿಗೆ ಜಿಲ್ಲಾಧ್ಯಕ್ಷ ಪಟ್ಟ ಕಟ್ಟಲಾಯಿತು. ಇವರೊಟ್ಟಿಗೆ ಡಾ.ಕೃಷ್ಣೇಗೌಡ ಹುಸ್ಕೂರು, ಬಿ.ಎಂ.ಅಪ್ಪಾಜಪ್ಪ, ಸುಜಾತಾ ಕೃಷ್ಣ ಅವರಿಗೂ ವಿವಿಧ ಹುದ್ದೆ ನೀಡಲಾಯಿತು.

ಮಹೇಶ ಜೋಶಿ ಅವರ ನಿರ್ಧಾರ ಜಿಲ್ಲಾ ಕಸಾಪದಲ್ಲಿ ಅಸಮಾಧಾನ ಭುಗಿಲೇಳುವಂತೆ ಮಾಡಿತು. ಇನ್ನೊಂದೆಡೆ ನೂತನ ಅಧ್ಯಕ್ಷ ಪ್ರೊ.ಎಚ್.ಎಸ್.ಮುದ್ದೇಗೌಡ ಅಧಿಕಾರ ವಹಿಸಿಕೊಂಡ ದಿನವೇ ’ಕಸಾಪ ಭವನ’ ಮಾರಾಟ ಮಾಡುವುದಾಗಿ ಘೋಷಣೆ ಮಾಡಿದ್ದು ವಿವಾದದ ಕಿಚ್ಚು ಇನ್ನಷ್ಟು ಹೆಚ್ಚಿಸಿತು. ಈ ನಡುವೆಯೇ ಹಲವರು ಮಹೇಶ ಜೋಶಿ ನಿಲುವಿನ ವಿರುದ್ಧ ಹೈಕೋರ್ಟ್ ಮೆಟ್ಟಿಲೇರಿದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ, 2024 ಡಿ.24ರಂದು ಜೋಶಿ ಹೊರಡಿಸಿದ್ದ ಆದೇಶಕ್ಕೆ ತಡೆಯಾಜ್ಞೆ ಹೊರಡಿಸಿದೆ.

Court orders stay on formation of new executive board

ಫೆ.2ಕ್ಕೆ ಮುಂದಿನ ವಿಚಾರಣೆ

ಜಿಲ್ಲಾ ಕಸಾಪ ಕಾರ್ಯಕಾರಿ ಸಮಿತಿ ಅಧ್ಯಕ್ಷರ ನಾಮನಿರ್ದೇಶನ ಕುರಿತಂತೆ ಮಹೇಶ ಜೋಶಿ ಆದೇಶಿಸಿದ್ದರು. ಜತೆಗೆ ನೂತನ ಕಾರ್ಯಕಾರಿ ಮಂಡಳಿ ರಚನೆಗೆ ನಿರ್ದೇಶನ ನೀಡಲಾಗಿತ್ತು. ಆದರೆ ಇದು ಪರಿಷತ್‌ನ ಬೈಲಾ ನಿಬಂಧನೆಗಳ ಉಲ್ಲಂಘನೆಯಾಗಿದೆ ಎಂದು ಅಸಮಾಧಾನಿತರು ನ್ಯಾಯಾಲಯದ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ತಡೆಯಾಜ್ಞೆ ನೀಡಿರುವ ಕೋರ್ಟ್, ಮುಂದಿನ ವಿಚಾರಣೆಯನ್ನು ಫೆ.2ಕ್ಕೆ ಮುಂದೂಡಿದೆ. ಇದರಿಂದಾಗಿ ಕಸಾಪ ಸಧ್ಯದ ವಿವಾದಕ್ಕೆ ತಾತ್ಕಾಲಿಕ ವಿರಾಮ ಸಿಕ್ಕಂತಾಗಿದೆ.

Court orders stay on formation of new executive board

ನ್ಯಾಯಾಲಯ ಪರಿಗಣಿಸಿದ ಅಂಶ

ಬೈಲಾ ನಿಬಂಧನೆಗಳ ಉಲ್ಲಂಘನೆಗೆ ಸಂಬಂಧಿಸಿದಂತೆ ನ್ಯಾಯಾಲಯ ಎರಡು ಅಂಶಗಳನ್ನು ಪರಿಗಣಿಸಿದೆ. ಅದರಂತೆ ಅಧ್ಯಕ್ಷರ ಅಧಿಕಾರವಧಿ ಪೂರ್ಣಗೊಳ್ಳುವ ಮೊದಲೇ ಕೇಂದ್ರ ಪರಿಷತ್ ಅಧ್ಯಕ್ಷ ಸ್ಥಾನ ಯಾವುದೇ ಕಾರಣದಿಂದಾಗಿ ತೆರವಾದಲ್ಲಿ ಇನ್ನುಳಿದ ಅವಧಿಗೆ ಕೇಂದ್ರ ಪರಿಷತ್‌ನ ಕಾರ್ಯಕಾರಿ ಸಮಿತಿಯ ಚುನಾಯಿತ ಸದಸ್ಯರಲ್ಲಿ ಒಬ್ಬರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಿಕೊಳ್ಳಬೇಕು. ಇದೇ ನಿಯಮ ಹೊರದೇಶದ ಘಟಕವನ್ನು ಹೊರತುಪಡಿಸಿ ಪರಿಷತ್‌ನ ಉಳಿದೆಲ್ಲ ಘಟಕಕ್ಕೆ ಅನ್ವಯವಾಗಲಿದೆ.

ಇದಲ್ಲದೆ ತೆರವಾದ ಸ್ಥಾನಕ್ಕೆ ಬೇರೊಬ್ಬರನ್ನು ಸಹ ಆಯ್ಕೆ ಮಾಡಿಕೊಳ್ಳುವ ಸಂಬಂಧ ರಾಜೀನಾಮೆ ಅಂಗೀಕೃತವಾದ ಅಥವಾ ಬೇರಾವುದೇ ಕಾರಣದಿಂದಾಗಿ ತೆರವಾದ ಸ್ಥಾನಕ್ಕೆ ಉಳಿದ ಅವಧಿಗೆ ಅರ್ಹರಾದ ಬೇರೊಬ್ಬರನ್ನು ಸಹ ಆಯ್ಕೆ ಮಾಡಿಕೊಳ್ಳುವ ಅಧಿಕಾರವನ್ನು ಆಯಾ ಘಟಕದ ಕಾರ್ಯಕಾರಿ ಸಮಿತಿ ಹೊಂದಿರುತ್ತದೆ. ತೆರವಾದ ಸ್ಥಾನದಲ್ಲಿ ಯಾವ ಜಿಲ್ಲೆ/ತಾಲೂಕು/ವರ್ಗದ ವ್ಯಕ್ತಿ ಸದಸ್ಯನಾಗಿದ್ದನೋ, ಅದೇ ಜಿಲ್ಲೆ/ತಾಲೂಕು/ವರ್ಗಕ್ಕೆ ಸೇರಿದ ವ್ಯಕ್ತಿಯನ್ನೇ ಸಹ ಆಯ್ಕೆ ಮಾಡಿಕೊಳ್ಳಬೇಕು. ಸಹ ಆಯ್ಕೆ ಮಾಡಿಕೊಂಡ ಮಾಹಿತಿಯನ್ನು ಕೇಂದ್ರ ಪರಿಷತ್ ಅಧ್ಯಕ್ಷರಿಗೆ ಆಯಾ ಘಟಕವು ಸಲ್ಲಿಸಬೇಕು. ಅದರನ್ನು ಅವರು ಕೇಂದ್ರ ಕಾರ್ಯಕಾರಿ ಸಮಿತಿ ಸಭೆಯಲ್ಲಿ ದಾಖಲಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net