ಡಿನೋಟಿಫಿಕೇಶನ್ ನಿರ್ಧಾರ ತಿಳಿಸಲು ಕೋರ್ಟ್ ಆದೇಶ

BA Ramesh Hegde press meet
Published on

ಶಿವಮೊಗ್ಗ: ಶರಾವತಿ ಮುಳುಗಡೆ ಸಂತ್ರಸ್ತರಿಗೆ ನೀಡಿರುವ 9,129 ಎಕರೆ ಡಿನೋಟಿಫಿಕೇಶನ್‌ಗೆ ಸಂಬಂಧಿಸಿದಂತೆ ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಯದರ್ಶಿಗಳ ಮಟ್ಟದಲ್ಲಿ ಚರ್ಚಿಸಿ ತೆಗೆದುಕೊಂಡ ನಿರ್ಧಾರವನ್ನು ನ್ಯಾಯಾಲಯದ ಮುಂದೆ ತರುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ ಎಂದು ಕೆಪಿಸಿಸಿ ವಕ್ತಾರ ಬಿ.ಎ.ರಮೇಶ್ ಹೆಗ್ಡೆ ಹೇಳಿದರು.

2017ರಲ್ಲಿ ಕಾಂಗ್ರೆಸ್ ಸರ್ಕಾರ ಶರಾವತಿ ಮುಳುಗಡೆ ಸಂತ್ರಸ್ತರ ಭೂಮಿಯನ್ನು ಡಿನೋಟಿಫಿಕೇಶನ್ ಮಾಡಿತ್ತು. ಆದರೆ ಡಿನೋಟಿಫಿಕೇಶನ್ ಮಾಡುವಾಗ ನಿಯಮದಂತೆ ಕೇಂದ್ರ ಸರ್ಕಾರದ ಅನುಮತಿ ಪಡೆದಿಲ್ಲ ಎಂಬುದನ್ನು ಗಿರೀಶ್ ಆಚಾರ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಹೀಗಾಗಿ ಹೈಕೋರ್ಟ್ ಡಿನೋಟಿಫೀಕೇಶನ್ ರದ್ದು ಮಾಡಿತ್ತು. ಈ ಸಂಬಂಧ ನ್ಯಾಯಾಲಯದಲ್ಲಿ ಸಮರ್ಥವಾದ ಮಂಡಿಸಲು ಅಂದಿನ ಬಿಜೆಪಿ ಸರ್ಕಾರ ವಿಫಲವಾಗಿದ್ದರಿಂದಾಗಿ ಡಿನೋಟಿಫಿಕೇಶನ್ ರದ್ದುಮಾಡಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿತ್ತು. ಚುನಾವಣೆ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ನೀಡಿದ ವಾಗ್ದಾನದಂತೆ ಡಿನೋಟಿಫಿಕೇಶನ್ ಸಂಬಂಧ ಸುಪ್ರೀಂಕೋರ್ಟ್‌ನಲ್ಲಿ ಐಎ ಸಲ್ಲಿಸಲಾಗಿತ್ತು. ಅರ್ಜಿ ವಿಚಾರಣೆ ನಡೆಸಿರುವ ನ್ಯಾಯಾಲಯ ಈ ಆದೇಶ ನೀಡಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

2025ರ ಜ.25ಕ್ಕೆ ಮುಂದಿನ ವಿಚಾರಣೆ ಇರುವುದರಿಂದ ಅದರೊಳಗೆ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆದೇಶದಲ್ಲಿ ತಿಳಿಸಲಾಗಿದೆ. ಇದರಿಂದ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆ ಪರಿಹಾರವಾಗುವ ವಿಶ್ವಾಸ ಬಂದಿದೆ. ಶರಾವತಿ ಮಳುಗಡೆ ಸಂತ್ರಸ್ತರ ಭೂಮಿ ಡಿನೋಟಿಫಿಕೇಶನ್ ಸಂಬಂಧ ರಾಜ್ಯ ಸರ್ಕಾರ ಐಎ ಸಲ್ಲಿಸಿಲ್ಲ ಎಂದು ಅನೇಕರು ಜಾಲ ತಾಣಗಳಲ್ಲಿ ಸುಳ್ಳು ಸುದ್ದಿ ಪ್ರಕಟಿಸಿದ್ದರು. ಆ ಸುಳ್ಳು ಸುದ್ದಿಗೆ ಈಗ ಉತ್ತರ ಸಿಕ್ಕಿದೆ. ನ್ಯಾಯಾಲಯದ ಆದೇಶದಂತೆ ಕೇಂದ್ರ ಸರ್ಕಾರ ಅಧಿಕಾರಿಗಳು ಹಾಗೂ ಚುನಾಯಿತ ಪ್ರತಿನಿಧಿಗಳು ಸಭೆ ನಡೆಸಿ ಸೂಕ್ತ ತೀರ್ಮಾನಕ್ಕೆ ಬರುವಂತೆ ಸಚಿವ ಮಧು ಬಂಗಾರಪ್ಪ ಪತ್ರ ಬರೆದಿದ್ದಾರೆ ಎಂದರು.

ಪ್ರಮುಖರಾದ ಎಸ್.ರವಿಕುಮಾರ್, ಜಿ.ಡಿ.ಮಂಜುನಾಥ್, ಇಕ್ಕೇರಿ ರಮೇಶ್, ಧರ್ಮರಾಜ್, ಡಿ.ಸಿ.ನಿರಂಜನ್, ರಾಜಪ್ಪ, ರಘುಪತಿ ಲಕ್ಷ್ಮಣಗೌಡ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net