ಡಿಎನ್‌ಎ ಪರೀಕ್ಷೆಗೆ ಕೋರ್ಟ್ ಅನುಮತಿ

baby
Published on

ಮಂಗಳೂರು: ಲೇಡಿಗೋಷನ್ ಆಸ್ಪತ್ರೆಯಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ಮಗು ಬದಲಾವಣೆ ಪ್ರಕರಣಕ್ಕೆ ಸಂಬಂಧಿಸಿ ಡಿಎನ್‌ಎ ಪರೀಕ್ಷೆಗೆ ಜಿಲ್ಲಾ ನ್ಯಾಯಾಲಯ ಅನುಮತಿ ನೀಡಿದೆ.

ನ್ಯಾಯಾಲಯದ ನಿರ್ದೇಶನದಂತೆ ಮಂಗಳವಾರ ಮಗು ಹಾಗೂ ಹೆತ್ತವರ ಡಿಎನ್‌ಎ ಸ್ಯಾಂಪಲ್ ಸಂಗ್ರಹಿಸಿ ಬೆಂಗಳೂರುಅಥವಾ ಹೈದರಾಬಾದ್‌ನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಮೂರು ತಿಂಗಳಲ್ಲಿ ವರದಿ ಬರಲಿದ್ದು, ಅದರ ಆಧಾರದಲ್ಲಿ ಮುಂದಿನ ತನಿಖೆ ಕೈಗೊಳ್ಳಲಾಗುವುದು ಎಂದು ಬಂದರು ಠಾಣಾ ನಿರೀಕ್ಷಕ ರಾಘವೇಂದ್ರ ತಿಳಿಸಿದ್ದಾರೆ.

ಪ್ರಕರಣದ ಹಿನ್ನೆಲೆ: ಕುಂದಾಪುರ ಮೂಲದ ಮುಸ್ತಾಫಾ ಎಂಬುವರ ಪತ್ನಿಗೆ ಲೇಡಿಗೋಷನ್ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು, ಈ ವೇಳೆ ಆಸ್ಪತ್ರೆ ಸಿಬ್ಬಂದಿ ಹೆಣ್ಣು ಮಗು ಎಂದು ತಿಳಿಸಿದ್ದರು. ತೀವ್ರ ಅನಾರೋಗ್ಯದ ಕಾರಣ ಮಗುವನ್ನು ಎನ್‌ಐಸಿಯುಗೆ ದಾಖಲಿಸಲಾಗಿತ್ತು. 10ಕ್ಕೂ ಹೆಚ್ಚು ದಿನ ಎನ್‌ಐಸಿಯುನಲ್ಲಿದ್ದ ಮಗುವನ್ನು ಮುಸ್ತಾಫಾ ಬ್ರಹ್ಮಾವರದ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಅಲ್ಲಿ ಗಂಡು ಮಗು ಎಂದು ತಿಳಿಸಿದ್ದಾರೆ.

ಸಂಶಯಗೊಂಡು ಲೇಡಿಗೋಷನ್‌ನಲ್ಲಿ ವಿಚಾರಿಸಿದಾಗ, ದಾಖಲೆಯಲ್ಲಿ ತಪ್ಪಾಗಿ ಹೆಣ್ಣು ಎಂದು ನಮೂದಿಸಲಾಗಿದೆ ಎಂಬ ಉತ್ತರ ಸಿಕ್ಕಿತ್ತು. ತೃಪ್ತರಾಗದ ಮುಸ್ತಾಫಾ ಬಂದರು ಠಾಣೆಯಲ್ಲಿ ಮಗು ಅಪಹರಣ ದೂರು ನೀಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net