ಬಾಂಗ್ಲಾ ಗಡಿಯಿಂದ ರಾಜ್ಯಕ್ಕೆ ನಕಲಿ ನೋಟು; ಮೂವರಿಗೆ 6 ವರ್ಷ ಜೈಲು

Fake Notes
Published on

ಬೆಂಗಳೂರು: ಬಾಂಗ್ಲಾದೇಶದ ಗಡಿಯಿಂದ ನಕಲಿ ನೋಟುಗಳನ್ನು ತಂದು ಚಲಾವಣೆ ಮಾಡುತ್ತಿದ್ದ ಪ್ರಕರಣದಲ್ಲಿ ಬಂಧಿತ ಮೂವರು ಅಪರಾಧಿಗಳಿಗೆ ಎನ್‌ಐಎ ವಿಶೇಷ ನ್ಯಾಯಾಲಯ 6 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಪಶ್ಚಿಮ ಬಂಗಾಳ ಮೂಲದ ದಾಲ್ ಮೀಯಾ ಇಲ್ಲಾಂ, ಚಿಕ್ಕೋಡಿಯ ಅಶೋಕ್ ಮಹದೇವ ಕುಂಬಾರ್ ಮತ್ತು ಶುಕ್ರುದ್ದೀನ್ ಶೇಖ್ ಅಲಿಯಾಸ್ ಶುಕ್ರುದ್ದೀನ್ ಅನ್ಸಾರಿ ಶಿಕ್ಷೆಗೆ ಗುರಿಯಾದ ಅಪರಾಧಿಗಳು ಎಂದು ಎನ್‌ಐಎ ಅಧಿಕಾರಿಗಳು ತಿಳಿಸಿದ್ದಾರೆ.

ಪುಣೆಯಲ್ಲಿ ಅಡಗಿದ್ದ ಕಳ್ಳ ನೋಟಿನ ಕಿಂಗ್‌ಪಿನ್ ದಾಲ್ ಮೀಯಾ ಇಸ್ಲಾಂನನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಬಾಂಗ್ಲಾ ಗಡಿಯಿಂದ ಖೋಟಾ ನೋಟುಗಳನ್ನು ಬೆಂಗಳೂರಿಗೆ ತಂದು ರಾಜ್ಯದ ವಿವಿಧೆಡೆಯಿಂದ ಬರುತ್ತಿದ್ದ ತನ್ನ ಸಹಚರರಿಗೆ ಕೊಟ್ಟು ಅವರಿಂದ ಅಸಲಿ ನೋಟುಗಳನ್ನು ಪಡೆಯುತ್ತಿದ್ದ. ಈ ಮೇರೆಗೆ 2018ರಲ್ಲಿ ಮಾ.12ರಂದು ಬೆಳಗಾವಿಯ ಚಿಕ್ಕೋಡಿ ಪ್ರಭುವಾಡಿ ನಿವಾಸಿ ಅಶೋಕ ಕುಂಬಾರ ಮತ್ತು ರಾಯಬಾಗ ತಾಲೂಕಿನ ಕುಡಚಿಯ ರಾಜೇಂದ್ರ ಬಾಪು ಪಾಟೀಲ್ ಅಲಿಯಾಸ್ ದೇಸಾಯಿ ಎಂಬುವರನ್ನು ಬಂಧಿಸಿದ್ದರು. 82 ಸಾವಿರ ರೂ. ಮೌಲ್ಯದ ನಕಲಿ ನೋಟು ಜಪ್ತಿ ಮಾಡಿದ್ದರು. ತನಿಖೆ ಪೂರ್ಣಗೊಳಿಸಿ ಆರೋಪಿಗಳ ವಿರುದ್ಧ ಎನ್‌ಐಎ ಅಧಿಕಾರಿಗಳು ಆರೋಪಪಟ್ಟಿ ಸಲ್ಲಿಸಿದ್ದರು.

ವಾದ-ಪ್ರತಿವಾದ ಆಲಿಸಿದ ಎನ್‌ಐಎ ವಿಶೇಷ ನ್ಯಾಯಾಲಯ ದಾಲ್ ಮೀಯಾ, ಅಶೋಕ್ ಮತ್ತು ಶುಕ್ರುದ್ದೀನ್‌ಗೆ 6 ವರ್ಷ ಜೈಲು ಶಿಕ್ಷೆ, 15 ಸಾವಿರ ರೂ. ದಂಡ ವಿಧಿಸಿ ತೀರ್ಪು ನೀಡಿದೆ. ಉಳಿದ ಆರೋಪಿಗಳ ವಿರುದ್ಧ ವಿಚಾರಣೆ ನಡೆಯುತ್ತಿದೆ. ಇದೇ ಕೇಸಿನಲ್ಲಿ ಆರೋಪಿಗಳಾದ ಸದ್ದಾಂ ಶೇಖ್, ಹಕೀಮ್ ಶೇಖ್ ಎಂಬುವರು ತಲೆಮರೆಸಿಕೊಂಡಿದ್ದು, ಬಂಧನಕ್ಕಾಗಿ ಕಾರ್ಯಾಚರಣೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net