ದೈವನರ್ತಕನನ್ನು ಬೆದರಿಸಿ ಸುಲಿಗೆ - ಇಬ್ಬರ ವಿರುದ್ಧ ಪ್ರಕರಣ ದಾಖಲಿಸಲು ನ್ಯಾಯಾಲಯ ಆದೇಶ

Published on

ದೈವನರ್ತಕನನ್ನು ಬೆದರಿಸಿ ಹಣ ಮತ್ತು ಚೆಕ್ ವಸೂಲಿ ಮಾಡಿದ ಬಗ್ಗೆ ಇಬ್ಬರ ವಿರುದ್ಧ ಪ್ರಕರಣ ದಾಖಲಿಸುವಂತೆ ಬಂಟ್ವಾಳ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಆದೇಶಿಸಿದೆ.

ದ.ಕ. ಜಿಲ್ಲಾ ದಲಿತ ಸಂಘದ ಸ್ಥಾಪಕಾಧ್ಯಕ್ಷ ಸೇಸಪ್ಪ ಬೆದ್ರಕಾಡು ಮತ್ತು ವಿಟ್ಲ ನೆಕ್ಕರೆಕಾಡು ನಿವಾಸಿ ಕಮಲಾ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರ್ಟ್ ಸೂಚಿಸಿದೆ. ಸಂತ್ರಸ್ತ ಆನಂದ ಸುರುಳಿಮೂಲೆ ವಿಟ್ಲ ಠಾಣೆಗೆ ದೂರು ನೀಡಿದಾಗ ಪೊಲೀಸರು ಸ್ಪಂದಿಸದ ಹಿನ್ನೆಲೆಯಲ್ಲಿ ವಕೀಲರ ಮೂಲಕ ಖಾಸಗಿ ದೂರು ದಾಖಲಿಸಿದ್ದರು.

ಆನಂದ ಅವರು ದೈವ ನರ್ತನ ಜತೆಗೆ ನಾಟಿವೈದ್ಯ ಹಾಗೂ ಜೋತಿಷ ವೃತ್ತಿ ಮಾಡುತ್ತಿದ್ದು, ಕಮಲಾ ಎಂಬುವರು ಸಮಸ್ಯೆ ಪರಿಹಾರಕ್ಕಾಗಿ ಆನಂದ ಬಳಿ ಬಂದಿದ್ದರು. ಈ ವೇಳೆ ಆನಂದ ಅವರು ಪೂಜೆ ಮಾಡಿಸುವಂತೆ ಸೂಚಿಸಿ, ೧೫ ಸಾವಿರ ರೂ. ವೆಚ್ಚವಾಗುತ್ತದೆ ಎಂದು ತಿಳಿಸಿದ್ದರು. ಪೂಜೆ ಬಳಿಕ ಕಮಲಾ ಮತ್ತು ಅವರ ಪತಿ ಹಣ ನೀಡಿರಲಿಲ್ಲ. ಕೇಳಿದಾಗ ಹಣ ಕೇಳಿದರೆ ಅತ್ಯಾಚಾರ ಕೇಸು ದಾಖಲಿಸುವುದಾಗಿ ಬೆದರಿಸಿದ್ದರು ಎನ್ನಲಾಗಿದೆ.

೨೦೨೪ ಅ.೧೦ರಂದು ಮಹಿಳೆ ಸೇಸಪ್ಪ ಬೆದ್ರಕಾಡು ನೆರವಿನಿಂದ ಠಾಣೆಯಲ್ಲಿ ಸುಳ್ಳು ಹೇಳಿಕೆ ಬರೆಸಿ ಹಣ ಕೇಳದಂತೆ ಆನಂದ ಅವರ ಬಳಿ ಸಹಿ ಪಡೆದಿದ್ದರು. ಅಲ್ಲದೆ ಠಾಣೆಯಿಂದ ಹೊರಬಂದ ಬಳಿಕ ೧.೨೫ ಲಕ್ಷ ರೂ.ಗೆ ಬೇಡಿಕೆಯಿಟ್ಟಿದ್ದು, ಕೊಡದಿದ್ದಲ್ಲಿ ಅತ್ಯಾಚಾರ ಕೇಸು ದಾಖಲಿಸಿ, ಜೈಲುಗಟ್ಟುವಂತೆ ಬೆದರಿಸಿದ್ದರು. ಬೆದರಿದ ಆನಂದ ತಲಾ ೨೫ ಸಾವಿರದ ೫ ಚೆಕ್ ಅನ್ನು ಸೇಸಪ್ಪ ಬೆದ್ರಕಾಡು ಅವರಿಗೆ ನೀಡಿದ್ದರು. ನ ೨೩ರಂದು ೨೫ ಸಾವಿರ ರೂ.ಗಳನ್ನು ಸೇಸಪ್ಪ ಅವರ ಪತ್ನಿಗೆ ಕಳುಹಿಸಿದ್ದರು. ಆರೋಪಿಗಳು ಇನ್ನಷ್ಟು ಹಣಕ್ಕಾಗಿ ಬೇಡಿಕೆಯಿಟ್ಟಾಗ ಆನಂದ ಅವರು ದ.ಕ. ಪೊಲೀಸ್ ವರಿಷ್ಠಾಽಕಾರಿಗೆ ದೂರು ನೀಡಿದ್ದರು. ಪೊಲೀಸರು ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.

ನ್ಯಾಯಾಲಯ ಬಿಎನ್‌ಎಸ್‌ಎಸ್ ಸೆಕ್ಷನ್ ೧೭೫(೩) ಅಡಿಯಲ್ಲಿ ಎಫ್‌ಐಆರ್ ದಾಖಲಿಸುವಂತೆ ಪೊಲೀಸರಿಗೆ ಆದೇಶಿಸಿದೆ. ಮಾತ್ರವಲ್ಲದೆ ಆನಂದ ಅವರು ನೀಡಿದ ದೂರಿನ ಕುರಿತಾಗಿ ಕ್ರಮ ಕೈಗೊಳ್ಳದ ಬಗ್ಗೆ ಹೇಳಿಕೆ ಸಲ್ಲಿಸಲು ವಿಟ್ಲ ಪೊಲೀಸ್ ಠಾಣೆಯ ಪ್ರಭಾರಿ ಅಽಕಾರಿಗೆ ಸೂಚಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net