ಕೋರ್ಟ್ ಕಾಮಗಾರಿಗೆ ವೇಗ

court
Published on

ಶ್ರವಣ್ ಕುಮಾರ್ ನಾಳ ಪುತ್ತೂರು

ಕರೊನಾ ಲಾಕ್‌ಡೌನ್ ಹಿನ್ನೆಲೆ ಸ್ಥಗಿತಗೊಂಡಿದ್ದ ಪುತ್ತೂರಿನ ಕೋರ್ಟ್ ಸಂಕೀರ್ಣ ನಿರ್ಮಾಣ ಕಾಮಗಾರಿ ವೇಗ ಪಡೆದುಕೊಂಡಿದೆ.

ನಗರದ ಹೊರವಲಯದ ಬನ್ನೂರಿನ ಆನೆಮಜಲಿನಲ್ಲಿ 5.5 ಎಕರೆ ವಿಸ್ತೀರ್ಣದಲ್ಲಿ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗಲಿದ್ದು, 2018ರ ನ.10ರಂದು ಶಿಲಾನ್ಯಾಸ ನೆರವೇರಿಸಲಾಗಿತ್ತು. ಈಗ ಜಿಲ್ಲಾಡಳಿತ ಕಾಮಗಾರಿಗಳ ಪಟ್ಟಿ ಪರಿಶೀಲಿಸಿ ಮತ್ತೆ ನಿರ್ಮಾಣ ಕಾರ್ಯಕ್ಕೆ ಅನುಮೋದನೆ ನೀಡಿದ್ದು, 100ಕ್ಕೂ ಅಧಿಕ ಕಾರ್ಮಿಕರು ಕಾಮಗಾರಿಗೆ ಸಾಥ್ ನೀಡಿದ್ದಾರೆ.

ಹೈಕೋರ್ಟ್ ಮಾದರಿ: ಬೆಂಗಳೂರಿನ ಹೈಕೋರ್ಟ್ ಮಾದರಿಯಲ್ಲಿ 50 ಕೋಟಿ ರೂ. ವೆಚ್ಚದಲ್ಲಿ 4 ಮಹಡಿಯ ನ್ಯಾಯಾಲಯ ಸಂಕೀರ್ಣ ನಿರ್ಮಾಣವಾಗಲಿದ್ದು, ಮೊದಲ ಹಂತದಲ್ಲಿ 25 ಕೋಟಿ ರೂ. ವೆಚ್ಚದಲ್ಲಿ 2 ಮಹಡಿಗಳ ಸಮುಚ್ಚಯ ನಿರ್ಮಾಣಗೊಳ್ಳಲಿದೆ.

ಇನ್ನೆರಡು ಮಹಡಿ ನಿರ್ಮಾಣ: ನೆಲ ಮಹಡಿಯಲ್ಲಿ ಅಂಚೆ ಕಚೇರಿ, ಬ್ಯಾಂಕ್, ನ್ಯಾಯಿಕ ಕೇಂದ್ರ ಇರಲಿದೆ. ಮೊದಲ ಮಹಡಿಯಲ್ಲಿ 4 ಕೋರ್ಟ್ ಹಾಲ್‌ಗಳು, 1 ಮೀಟಿಂಗ್ ಹಾಲ್, ಇತರ ಕಚೇರಿಗಳು, ದಾಖಲೆ ಕಚೇರಿ, ಸೆಲ್, ಕಂಪ್ಯೂಟರ್ ರೂಂ, ಪಡಸಾಲೆ, ಶೌಚಗೃಹ, ವಿಶ್ರಾಂತಿ ಕೊಠಡಿ ಇರಲಿದೆ. ಇದೇ ಮಾದರಿಯಲ್ಲಿ ಭವಿಷ್ಯದಲ್ಲಿ ಇನ್ನೆರಡು ಮಹಡಿಗಳು ನಿರ್ಮಾಣವಾಗಲಿವೆ. ಒಟ್ಟು 8 ಕೋರ್ಟ್ ಹಾಲ್‌ಗಳನ್ನು ನಿರ್ಮಿಸುವ ಉದ್ದೇಶವಿದೆ. ನ್ಯಾಯಾಲಯ ಸಂಕೀರ್ಣದಲ್ಲಿ ಪ್ರತ್ಯೇಕವಾಗಿ ಬಾರ್ ಅಸೋಸಿಯೇಶನ್ ಕಟ್ಟಡ, ಪ್ರಾಪರ್ಟಿ ಕಟ್ಟಡ ನಿರ್ಮಾಣವಾಗಲಿದ್ದು, ಇದಕ್ಕೆ 4 ಕೋಟಿ ರೂ. ಮಂಜೂರಾಗಿದೆ.

ಮೊದಲ ಹಂತದ ಕಾಮಗಾರಿ ಶೇ.15ರಷ್ಟು ಪೂರ್ಣಗೊಂಡಿದೆ. ಈಗಾಗಲೇ ಕಾಮಗಾರಿ ಬಿರುಸಿನಿಂದ ನಡೆಯುತ್ತಿದ್ದು, ಮೇ- ಜೂನ್ ವೇಳೆಗೆ ಮೊದಲ ಹಂತದ ಕಾಮಗಾರಿ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.

ಪ್ರಮೋದ್ ಕುಮಾರ್ ಕೆ. ಲೋಕೋಪಯೋಗಿ ಇಲಾಖೆಯ ಸಹಾಯಕ ಇಂಜಿನಿಯರ್

ಕರೊನಾ ಲಾಕ್‌ಡೌನ್ ಹಿನ್ನೆಲೆ ಸ್ಥಗಿತಗೊಂಡಿದ್ದ ಆನೆಮಜಲು ಕೋರ್ಟ್ ಸಂಕೀರ್ಣ ಕಾಮಗಾರಿ ವೇಗ ಪಡೆದುಕೊಂಡಿದೆ. 2ನೇ ಹಂತದ ಕಾಮಗಾರಿಗಾಗಿ 25 ಕೋಟಿ ರೂ. ಶೀಘ್ರದಲ್ಲಿ ಬಿಡುಗಡೆಗೆ ಕ್ರಮ ವಹಿಸಲಾಗುವುದು.

ಸಂಜೀವ ಮಠಂದೂರು, ಪುತ್ತೂರು ಶಾಸಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net