

ಮೈಸೂರು:ಕ್ರೀಡೆ ಮನಸ್ಸು ಹಾಗೂ ದೇಹವನ್ನು ಸದೃಢವಾಗಿ ಇರಿಸುವುದರಿಂದ ಪಾಲಕರು ಮಕ್ಕಳನ್ನು ಕ್ರೀಡೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕ ಪ್ರೊ.ಸಿ.ವೆಂಕಟೇಶ್ ಸಲಹೆ ನೀಡಿದರು.
ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಸೋಮವಾರ ಆಯೋಜಿಸಿದ್ದ ಒಂದು ತಿಂಗಳ ತರಬೇತಿ ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ವಿದ್ಯಾರ್ಥಿಗಳಿಗೆ ಶಿಕ್ಷಣ ಎಷ್ಟು ಮುಖ್ಯವೋ ಅಷ್ಟೇ ಕ್ರೀಡೆಯೂ ಅಗತ್ಯ. ಕ್ರೀಡೆಯಿಂದ ಮನಸ್ಸು, ದೈಹಿಕ ದೃಢತೆ ಹಾಗೂ ಪರಿಸ್ಥಿತಿಯನ್ನು ನಿಭಾಯಿಸುವ ಧೈರ್ಯವೂ ಬರುತ್ತದೆ. ಶಿಸ್ತು ಮೂಡುವುದರಿಂದ ಸಾಮಾಜಿಕವಾಗಿಯೂ ಗೌರವ ಬರುತ್ತದೆ ಎಂದರು.
ಇಂದಿನ ವಿದ್ಯಾರ್ಥಿಗಳಲ್ಲಿ ಮೊಬೈಲ್ ಹಾವಳಿಯಿಂದ ಸಾಮಾಜಿಕ ಜಾಲತಾಣ, ವಿಡಿಯೋ ಗೇಮ್‌ಗಳ ಗೀಳು ಹೆಚ್ಚಾಗಿದೆ. ಇದು ವಿದ್ಯಾರ್ಥಿಗಳನ್ನು ಮಾನಸಿಕವಾಗಿ ಕುಗ್ಗಿಸುವಂತಹ ಕೆಲಸವಾಗುತ್ತಿದೆ. ಆದ್ದರಿಂದ ಮಕ್ಕಳ ಮನಸ್ಸು ವಿಕಾಸಗೊಳ್ಳಲು ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವಂತೆ ಮಾಡಬೇಕು ಎಂದು ಹೇಳಿದರು.
ಮೈಸೂರು ವಿಶ್ವವಿದ್ಯಾಲಯದ ವಾಣಿಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ.ನಾಗರಾಜು ಮಾತನಾಡಿ, ವಿಶ್ವವಿದ್ಯಾಲಯದಲ್ಲಿ ತರಬೇತಿ ಪಡೆದ ಅನೇಕ ಕ್ರೀಡಾಪಟುಗಳು ರಾಜ್ಯ, ರಾಷ್ಟ್ರವನ್ನು ಪ್ರತಿನಿಧಿಸಿ ಬಹು ಎತ್ತರಕ್ಕೆ ಏರಿದ್ದಾರೆ. ವಿಶ್ವವಿದ್ಯಾಲಯದ ವಿದ್ಯಾರ್ಥಿಗಳಿಗೆ ಮಾತ್ರವಲ್ಲದೆ ಹೊರಗಿನ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೂ ತರಬೇತಿ ನೀಡುತ್ತಿರುವುದು ಶ್ಲಾಘನೀಯ ಕೆಲಸ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕ್ರೀಡೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಉನ್ನತ ಶಿಕ್ಷಣದ ದಾಖಲಾತಿ ಹಾಗೂ ಉದ್ಯೋಗದಲ್ಲಿಯೂ ಮೀಸಲಾತಿಯೂ ದೊರೆಯುತ್ತದೆ. ಆದ್ದರಿಂದ ಪಾಲಕರು ತಮ್ಮ ಮಕ್ಕಳು ಯಾವುದರಲ್ಲಿ ಆಸಕ್ತಿ ಹೊಂದಿದ್ದಾರೆಯೋ ಅಂತಹ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹ ನೀಡುವಂತೆ ತಿಳಿಸಿದರು.
ಮೈಸೂರು ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ವಿಭಾಗದ ಉಪ ನಿರ್ದೇಶಕ ಪ್ರೊ.ಪಿ.ಕೃಷ್ಣಯ್ಯ ಮಾತನಾಡಿ, ಎಲ್ಲ ವಿದ್ಯಾರ್ಥಿಗಳಿಗೂ ಅನುಕೂಲವಾಗಬೇಕು, ಪ್ರತಿಭೆಗಳನ್ನು ಪ್ರೋತ್ಸಾಹಿಸಲು ನೆರವಾಗಬೇಕು ಎನ್ನುವ ಉದ್ದೇಶದಿಂದ ವಿಶ್ವವಿದ್ಯಾಲಯ 29 ವರ್ಷಗಳಿಂದ ವಿವಿಧ ಕ್ರೀಡಾ ತರಬೇತಿ ನೀಡುತ್ತ ಬರಲಾಗುತ್ತಿದೆ ಎಂದು ಹೇಳಿದರು.
ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಆಸಕ್ತಿ ಹೆಚ್ಚಾಗುತ್ತಿದ್ದು, ಈ ಬಾರಿ ವಿವಿಧ 24 ಕ್ರೀಡೆಗಳಿಗೆ ತರಬೇತಿ ನೀಡಲಾಗಿದೆ. ತರಬೇತಿ ಶಿಬಿರ ಮುಗಿದ ಬಳಿಕವೂ ಆಸಕ್ತರು ಮುಂದೆ ಬಂದರೆ ನಿರಂತರ ತರಬೇತಿ ನೀಡಲಾಗುವುದು ಎಂದು ವಿವರಿಸಿದರು.
ದ್ರೋಣಾಚಾರ್ಯ ಪ್ರಶಸ್ತಿ ಪುರಸ್ಕೃತ ಜಿಮ್ನಾಸ್ಟಿಕ್ ತರಬೇತುದಾರ ಅರುಣ್‌ಕುಮಾರ್ ಪಾಟೀಲ್, ತರಬೇತಿ ಪಡೆದ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು.