ಸಾಂಪ್ರದಾಯಿಕ ಉಡುಗೆಯಲ್ಲಿ ಮಿಂಚಿದ ಜೋಡಿಗಳು

mysore
Published on

ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನ ಪ್ರಮುಖ ಬೀದಿಗಳಲ್ಲಿ ಬೆಳಗ್ಗೆ ಸುರಿದ ಸೋನೆ ಮಳೆಯಲ್ಲೇ ಸಾಂಪ್ರದಾಯಿಕ ಉಡುಗೆ ತೊಟ್ಟ ದಂಪತಿಗಳ ಟಾಂಗಾ ಸವಾರಿ ಗಮನ ಸೆಳೆಯಿತು.

ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದ 50 ದಂಪತಿ ತಮ್ಮ ಸಾಂಪ್ರದಾಯಿಕ ಉಡುಗೆಗಳನ್ನು ತೊಟ್ಟು ಮಿಂಚಿದರು. ದಸರಾ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯಿಂದ ಆಯೋಜಿಸಿದ್ದ ‘ಪಾರಂಪರಿಕ ಉಡುಗೆಯಲ್ಲಿ ದಂಪತಿಗಳ ಟಾಂಗಾ ಸವಾರಿ’ಗೆ ರಂಗಚಾರ್ಲು ಪುರಭವನ ಶನಿವಾರ ಸಾಕ್ಷಿಯಾಯಿತು.

ಸಾಮೂಹಿಕ ವಿವಾಹವನ್ನು ಏರ್ಪಾಡು ಮಾಡುವ ರೀತಿಯಲ್ಲಿ ವೇದಿಕೆಯು ಕಂಗೊಳಿಸಿತು. ನೂತನ ದಂಪತಿಗಳಂತೆ ಎಲ್ಲ ಜೋಡಿಗಳು ಜನರನ್ನು ಆಕರ್ಷಿಸಿದವು. ತುಂತುರು ಹನಿಯ ನಡುವೆಯೂ ಸಂಭ್ರಮದ ವಾತಾವರಣ ಕಂಡುಬಂತು.

ಮೈಸೂರು, ಶಿವಮೊಗ್ಗ, ಹಾಸನ, ಬೆಂಗಳೂರು, ಇನ್ನಿತರ ಜಿಲ್ಲೆಗಳಿಂದ ನೋಂದಾಯಿತ ದಂಪತಿಗಳು ಆಯಾ ಜಿಲ್ಲೆಗಳ ಸಾಂಪ್ರದಾಯಿಕ ಉಡುಗೆಯ ಮೂಲಕ ಕಣ್ಮನ ಸೆಳೆದರು. ಕೊಡಗು, ಮೈಸೂರಿನ ಪಾರಂಪರಿಕ ಉಡುಗೆ ತೊಟ್ಟ ದಂಪತಿಗಳ ಸಂಖ್ಯೆ ಹೆಚ್ಚಿತ್ತು. ಕೆಲ ದಂಪತಿಗಳು ಮೈಸೂರು ಪೇಟ, ರೇಷ್ಮೆ ಸೀರೆ ತೊಟ್ಟು ಕಂಗೊಳಿಸಿದರು. ಕಿರಿಯ-ಹಿರಿಯ ವಯಸ್ಸಿನ ಜೋಡಿಗಳು ಭಾಗಿಯಾಗಿ ಜನರ ಗಮನ ಸೆಳೆದರು. ಜೋಡಿಗಳು 25 ಟಾಂಗಾಗಾಡಿಗಳ ಮೂಲಕ ನಗರದ ಐತಿಹಾಸಿಕ ರಸ್ತೆಗಳಲ್ಲಿ ಸಾಗಿ ಪಾರಂಪರಿಕ ಕಟ್ಟಡ ದರ್ಶನ ಮಾಡಿದರು.

ಸಂಪನ್ಮೂಲ ವ್ಯಕ್ತಿಯಾದ ಪಾರಂಪರಿಕ ತಜ್ಞ ಡಾ.ಎನ್.ಎಸ್.ರಂಗಾರಾಜು ಮತ್ತು ಇತಿಹಾಸ ಪ್ರಾಧ್ಯಾಪಕ ಡಾ.ಲ.ನ.ಸ್ವಾಮಿ ಅವರು ನಗರದ ಪ್ರಮುಖ ಪಾರಂಪರಿಕ ಕಟ್ಟಡಗಳ ಬಗ್ಗೆ ಮಾಹಿತಿ ನೀಡಿದರು.

ಪುರಾತತ್ವ ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆಯ ಆಯುಕ್ತ ಎ.ದೇವರಾಜು ಮಾತನಾಡಿ, ನಮ್ಮ ಇಲಾಖೆಯು ಪರಂಪರೆಯನ್ನು ಸಂರಕ್ಷಿಸಿ, ಅದನ್ನು ಮುಂದಿನ ಪೀಳಿಗೆಗೆ ರವಾನಿಸುವಂತಹ ಕೆಲಸ ಮಾಡುತ್ತಿದೆ. ಸಂಸ್ಕೃತಿ ಪ್ರಚಲಿತಗೊಳಿಸಿ ಹೆಚ್ಚು ಜನರಿಗೆ ತಲುಪಿಸುವ ಮೂಲಕ ಅದನ್ನು ಕಾಪಾಡಬೇಕಿದೆ ಎಂದರು.

ಹಿಂದೆ ರಾಜರ ಕಾಲದಲ್ಲೂ ಟಾಂಗಾ ಸವಾರಿ ಬಳಕೆಯಲ್ಲಿ ಇತ್ತು. ಈಗಲೂ ಸಾಂಪ್ರದಾಯಿಕ ಸಾರಿಗೆ ಮುಂದುವರಿದಿದೆ. ಹೀಗಾಗಿ, ಮೈಸೂರು ಎಂದರೆ ಟಾಂಗಾ, ಟಾಂಗಾ ಎಂದರೆ ಮೈಸೂರು ಎಂಬ ಮಾತಿದೆ. ಇಲ್ಲಿಗೆ ಆಗಮಿಸುವಂತಹ ಪ್ರವಾಸಿಗರು ಟಾಂಗಾ ಸವಾರಿ ಮಾಡದೆ ಹಿಂತಿರುಗುವುದಿಲ್ಲ. ಹೀಗಾಗಿ ಸಾಂಪ್ರದಾಯಿಕ ಉಡುಗೆ ಮತ್ತು ಟಾಂಗಾ ಸವಾರಿ ಇವೆರಡನ್ನು ಒಂದುಗೂಡಿಸಿ ಪಾರಂಪರಿಕ ದಸರಾವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net