ಪತ್ನಿ ರಕ್ಷಣೆಗೆ ಬಾವಿಗಿಳಿದ ಪತಿ: ಪ್ರಾಣಾಪಾಯಕ್ಕೆ ಸಿಲುಕಿದ ದಂಪತಿಯ ಪಾರು ಮಾಡಿದ ಅಗ್ನಿಶಾಮಕ ದಳ

Woman Rescue
Published on

ಈಶ್ವರಮಂಗಲ: ಕೆಯ್ಯೂರು ಗ್ರಾಮದ ಮಾಡಾವು ಸಮೀಪದ ಸಣಂಗಳ ಎಂಬಲ್ಲಿ ನೀರು ತರಲೆಂದು ಹೋದ ಮಹಿಳೆ ಆಕಸ್ಮಿಕವಾಗಿ ಆಯತಪ್ಪಿ 60 ಅಡಿ ಆಳದ ಬಾವಿಗೆ ಬಿದ್ದಿದ್ದು, ಪತ್ನಿ ರಕ್ಷಣೆಗೆಂದು ಬಾವಿಗಿಳಿದ ಪತಿ ಪ್ರಾಣಾಪಾಯಕ್ಕೆ ಸಿಲುಕಿದ್ದರು. ಅವರನ್ನು ಅಗ್ನಿಶಾಮಕ ದಳದವರು ಕಾರ್ಯಾಚರಣೆ ನಡೆಸಿ ರಕ್ಷಿಸಿದ್ದಾರೆ.

ಸದಾಶಿವ ರೈ ಅವರ ಪತ್ನಿ ಸುನಂದಾ ಸುಮಾರು 20 ಅಡಿಯಷ್ಟು ನೀರಿರುವ ಬಾವಿಗೆ ಬಿದ್ದಿದ್ದರು. ಮನೆಯೊಳಗಿದ್ದ ಅವರ ಪತಿ ಸದಾಶಿವ ರೈ, ಶಬ್ದ ಕೇಳಿ ಬಾವಿ ಬಳಿಗೆ ತೆರಳಿ ಆಕೆಯನ್ನು ರಕ್ಷಣೆ ಮಾಡಲು ಬಾವಿಗೆ ಇಳಿದಿದ್ದರು. ಆದರೆ ನೀರಿನಿಂದ ಪತ್ನಿಯನ್ನು ಮೇಲಕ್ಕೆ ತರಲು ಸಾಧ್ಯವಾಗಿರಲಿಲ್ಲ. ಅಪಾಯಕ್ಕೆ ಸಿಲುಕಿದ್ದ ದಂಪತಿ ಬಾವಿಗೆ ಅಳವಡಿಸಿದ್ದ ಪಂಪಿನ ಹಗ್ಗ ಹಿಡಿದುಕೊಂಡು ಕೆಲ ಗಂಟೆಗಳ ಕಾಲ ಸಾವಿನ ವಿರುದ್ಧ ಹೋರಾಟ ನಡೆಸಿದ್ದಾರೆ.

ಸ್ಥಳೀಯರು ನೀಡಿದ ಮಾಹಿತಿಯಂತೆ ಪುತ್ತೂರು ಅಗ್ನಿಶಾಮಕ ಠಾಣಾಧಿಕಾರಿ ವಿ.ಸುಂದರ್ ನೇತೃತ್ವದ ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಬಂದು ಬಾವಿಯಲ್ಲಿದ್ದ ದಂಪತಿಯನ್ನು ಮೇಲೆತ್ತುವ ಕಾರ್ಯಾಚರಣೆ ನಡೆಸಿದರು. ಅಗ್ನಿಶಾಮಕ ದಳದ ರುಕ್ಮಯ್ಯ ಗೌಡ ಅವರು ದಂಪತಿಯನ್ನು ಬಾವಿಯಿಂದ ಮೇಲೆತ್ತಿ ರಕ್ಷಣೆ ಮಾಡಿದ್ದು, ಅಗ್ನಿಶಾಮಕದಳದ ಠಾಣಾಧಿಕಾರಿ ವಿ.ಸುಂದರ್ ನೇತೃತ್ವದಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಮುಂಜುನಾಥ್, ಚಾಲಕ ಮೋಹನ್ ಜಾದವ್, ಗೃಹರಕ್ಷಕ ದಳದ ಚಂದ್ರಕುಮಾರ್ ರಕ್ಷಣಾ ಕಾರ್ಯದಲ್ಲಿ ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net