ಮಿತಿಮೀರಿದ ಜೋಡಿ ಆನೆ ಉಪಟಳ ಕಾರ್ಯಾಚರಣೆಗೂ ಬಗ್ಗದ ಗಜಗಳು

Kailancha-Ph-2-Ane Fokash Story-Handigondi Forest-(jodi Ane Sangraha Chithra) 22-12-2023
Published on
ವಿಭೂತಿಕೆರೆ ಶಿವಲಿಂಗಯ್ಯ ಕೈಲಾಂಚ

ಹಂದಿಗೊಂದಿ ಅರಣ್ಯ ಪ್ರದೇಶಕ್ಕೆ ಆಗಮಿಸಿ ಬೀಡುಬಿಟ್ಟಿರುವ ಜೋಡಿ ಆನೆಗಳು ಅರಣ್ಯದಂಚಿನ ಗ್ರಾಮಗಳ ಜಮೀನುಗಳ ಮೇಲೆ ಪ್ರತಿದಿನ ದಾಳಿ ನಡೆಸುತ್ತಾ ರೈತರಿಗೆ ನಷ್ಟ ಉಂಟು ಮಾಡುತ್ತಿದ್ದು, ಅರಣ್ಯ ಇಲಾಖೆ ಕಾರ್ಯಾಚರಣೆಗೂ ಬಗ್ಗದೆ ತಲೆನೋವಾಗಿವೆ.

ಬನ್ನೇರುಘಟ್ಟ ಅಥವಾ ಕಾವೇರಿ ವನ್ಯಜೀವಿಧಾಮದಿಂದ ಬಂದಿರುವ ಈ ಆನೆಗಳು ತೆಂಗಿನಕಲ್ಲು ಅರಣ್ಯದ ಮೂಲಕ ಕೋಟಹಳ್ಳಿ ಸಮೀಪ ಅರ್ಕಾವತಿ ನದಿ ದಾಟಿ ಹಂದಿಗೊಂದಿ ಅರಣ್ಯ ಸೇರಿವೆ. ಕಳೆದ 20 ದಿನಗಳಿಂದಲೂ ಅರಣ್ಯ ಬಿಟ್ಟು ಕದಲುತ್ತಿಲ್ಲ. ಅರಣ್ಯ ಭಾಗದ ಗ್ರಾಮಗಳಾದ ತುಂಬೇನಹಳ್ಳಿ, ವಡ್ಡರಹಳ್ಳಿ, ನಾಗೋಹಳ್ಳಿ, ಬಸವನಪುರ, ಕೇತೋಹಳ್ಳಿ, ಗುನ್ನೂರು, ಸಿಂಗಸಂದ್ರ, ಅಣ್ಣಹಳ್ಳಿ, ಹುಲಿಕೆರೆ ಭಾಗಗಳಲ್ಲಿ ಸಂಚರಿಸಿ ಜಮೀನಿನಲ್ಲಿ ಬೆಳೆದಿರುವ ಫಸಲು ನಾಶ ಮಾಡಿ ಉಪಟಳ ನೀಡುತ್ತಿವೆ. ಅಲ್ಲದೆ ಸಂಜೆ, ಬೆಳಗಿನ ವೇಳೆಯಲ್ಲಿ ಗ್ರಾಮದ ಅಕ್ಕಪಕ್ಕ ಜಮೀನಿನ ಬಳಿ ಕಾಣಿಸಿಕೊಳ್ಳುವ ಆನೆಗಳು ಭಯದ ವಾತಾವರಣ ಉಂಟು ಮಾಡಿವೆ.

ಸಿಬ್ಬಂದಿ ಹೈರಾಣ: ದಿನವಿಡೀ ಆನೆಗಳ ಚಲನವಲನದ ಮೇಲೆ ನಿಗಾ ಇಟ್ಟಿರುವ ಅರಣ್ಯದಿಂದ ಹೊರಬರದಂತೆ ಅರಣ್ಯ ಇಲಾಖೆ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಪ್ರತಿದಿನ ರಾತ್ರಿ ಅರಣ್ಯ ಇಲಾಖೆಯ 15 ಸಿಬ್ಬಂದಿ ತಂಡ ಆನೆಗಳನ್ನು ಸ್ವಸ್ಥಾನಕ್ಕೆ ಅಟ್ಟಲು ಕಾರ್ಯಾಚರಣೆ ನಡೆಸುತ್ತಿದೆ. ಹುಲಿಕೆರೆ ಸಮೀಪ ಅರ್ಕಾವತಿ ನದಿ ಹತ್ತಿರ ಸಾಗಿ ಬರುವ ಆನೆಗಳು ನದಿ ದಾಟದೆ ವಾಪಸ್ ಹಂದಿಗೊಂದಿ ಅರಣ್ಯಕ್ಕೆ ಬರುತ್ತಿವೆ. ಸತತ ಕಾರ್ಯಾಚರಣೆ ನಡುವೆಯೂ ಆನೆಗಳನ್ನು ಹಿಮ್ಮೆಟ್ಟಿಸಲು ಸಾಧ್ಯವಾಗದೆ ಅರಣ್ಯ ಇಲಾಖೆ ಸಿಬ್ಬಂದಿ ಹೈರಾಣಾಗಿದ್ದಾರೆ.

ಹಂದಿಗೊಂದಿ ಅರಣ್ಯ ಪ್ರದೇಶ ಸುಮಾರು 10 ಸಾವಿರ ಎಕರೆಗೂ ಮೀರಿ ವಿಸ್ತಾರ ಹೊಂದಿದ್ದು, ಗಿಡ-ಮರ, ಹಳ್ಳಕೊಳ್ಳಗಳಿಂದ ಆವರಿಸಿದೆ. ಹೀಗಾಗಿ ಆನೆಗಳಿಗೆ ಸೂಕ್ತ ಸ್ಥಳವಾಗಿದೆ. ಸಂಜೆಯಾದರೆ ಅರಣ್ಯದಿಂದ ಹೊರ ಬರುವ ಜೋಡಿ ಆನೆಗಳು ರೈತರ ಜಮೀನಿನ ಮೇಲೆ ದಾಳಿ ನಡೆಸಿ ತೆಂಗು, ಮಾವು, ಅಡಕೆ, ನೀರಾವರಿ ಪರಿಕರಗಳನ್ನು ನಾಶ ಮಾಡುತ್ತಿವೆ. ಪ್ರಸ್ತುತ ರಾಗಿ, ಭತ್ತದ ಕೊಯ್ಲು ಪ್ರಾರಂಭವಾಗಿದ್ದು ಜಮೀನುಗಳಿಗೆ ದಾಂಗುಡಿ ಇಟ್ಟು ಫಸಲು ನಾಶಪಡಿಸುತ್ತಿವೆ. ರೈತರಿಗೆ ಇದು ನುಂಗಲಾರದ ತುತ್ತಾಗಿದೆ. ಈ ಬಾರಿ ಮುಂಗಾರು ಮಳೆ ಕೈಕೊಟ್ಟಿದ್ದು ಬೆಳೆದಿರುವ ಅಲ್ಪಸ್ವಲ್ಪ ಫಸಲು ಕೂಡ ಆನೆಗಳ ದಾಳಿಗೆ ತುತ್ತಾಗಿ ರೈತರಿಗೆ ಸಂಕಷ್ಟ ತಂದೊಡ್ಡಿದೆ.

4 ವರ್ಷದಿಂದಲೂ ಉಪಟಳ

ಕಳೆದ ಮೂರ‌್ನಾಲ್ಕು ವರ್ಷಗಳಿಂದಲೂ ಹಂದಿಗೊಂದಿ ಅರಣ್ಯದ ಸುತ್ತಮುತ್ತ ಆನೆಗಳ ಉಪಟಳ ಹೆಚ್ಚಾಗಿದೆ. ಪದೇಪದೆ ಆನೆಗಳು ದಾಳಿ ನಡೆಸಿ ಕೃಷಿಗೆ ಪೆಟ್ಟು ನೀಡುತ್ತಿವೆ. ಬನ್ನೇರುಘಟ್ಟ ಇಲ್ಲವೇ ಕಾವೇರಿ ವನ್ಯಜೀವಿಧಾಮದಲ್ಲೇ ಆನೆಗಳನ್ನು ತಡೆಯಬೇಕು. ಹಾಗೂ ಈ ಜೋಡಿ ಆನೆಗಳನ್ನು ಸ್ವಸ್ಥಾನಕ್ಕೆ ಅಟ್ಟಬೇಕು ಎಂದು ಗುನ್ನೂರು ಶಂಕರ್ ಆಗ್ರಹಿಸಿದ್ದಾರೆ.

ಬಾಳೆ ತೋಟ ಕಣ್ಮರೆ

ಹುಲಿಕೆರೆ, ವಡ್ಡರಹಳ್ಳಿ, ನಾಗೋಹಳ್ಳಿ, ಹುಣಸನಹಳ್ಳಿ ಭಾಗಗಳಲ್ಲಿ ಅರ್ಕಾವತಿ ನದಿ ನೀರು ಬಳಸಿಕೊಂಡು ಹೆಚ್ಚಾಗಿ ರೈತರು ಬಾಳೆ ತೋಟ ನಿರ್ವಹಣೆ ಮಾಡುತ್ತಾರೆ. ಪ್ರಮುಖವಾಗಿ ಏಲಕ್ಕಿ ಬಾಳೆ ಬೆಳೆಯುತ್ತಾರೆ. ಆದರೆ, ಕಳೆದ 3-4 ವರ್ಷಗಳಿಂದ ಆನೆಗಳ ಉಪಟಳ ಮಿತಿ ಮೀರಿದ್ದು, ರೈತರು ನಷ್ಟಭಯದಿಂದ ಬಾಳೆ ಬೆಳೆಯುವುದನ್ನೇ ಬಿಟ್ಟಿದ್ದಾರೆ. ಹಂದಿಗೊಂದಿ ಅರಣ್ಯ ಅಕ್ಕಪಕ್ಕದಲ್ಲಿ ಹೇರಳವಾಗಿ ಕಾಣಿಸುತ್ತಿದ್ದ ಬಾಳೆ ತೋಟಗಳು ಈಗ ವಿರಳವಾಗಿವೆ.

ಹಂದಿಗೊಂದಿ ಅರಣ್ಯಕ್ಕೆ ಬಂದಿರುವ ಜೋಡಿ ಆನೆಗಳನ್ನು ಹಿಮ್ಮೆಟ್ಟಿಸಲು ಅರಣ್ಯ ಇಲಾಖೆ ನಿರಂತರವಾಗಿ ಕಾರ್ಯಾಚರಣೆ ನಡೆಸುತ್ತಿದೆ. ಆದರೆ, ಇವು ಹೊಸ ಆನೆಗಳಂತೆ ಕಾಣುತ್ತಿವೆ. ಅವುಗಳ ಮಾರ್ಗ ಬದಲಾವಣೆಯಿಂದ ಕಾರ್ಯಾಚರಣೆಯಲ್ಲಿ ಸ್ವಸ್ಥಾನ ಸೇರುತ್ತಿಲ್ಲ. ವಾಪಸ್ ಬರುತ್ತಿವೆ. ಒಂದೆರಡು ದಿನಗಳಲ್ಲಿ ಹೆಚ್ಚಿನ ಸಿಬ್ಬಂದಿಯೊಂದಿಗೆ ಕಾರ್ಯಾಚರಣೆ ಕೈಗೊಳ್ಳಲಾಗುತ್ತದೆ.

ದಿನೇಶ್, ವಲಯ ಅರಣ್ಯಾಧಿಕಾರಿ, ರಾಮನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net