

ಚಿಕ್ಕಬಳ್ಳಾಪುರ: ಚಿಂತಾಮಣಿ ನಗರದ ಜನನಿಬಿಡ ಮತ್ತು ವಾಹನ ದಟ್ಟಣೆಯ ರಾಷ್ಟ್ರೀಯ ಹೆದ್ದಾರಿ ಎಂ.ಜಿ.ರಸ್ತೆಯಲ್ಲಿ ಆಯತಪ್ಪಿ ಬಿದ್ದ ವೇಳೆ ಸಾರಿಗೆ ಸಂಸ್ಥೆಯ ಬಸ್ ಹರಿದು ಬೈಕ್ ಸವಾರರಿಬ್ಬರು ಮೃತಪಟ್ಟಿದ್ದಾರೆ.
ಚಿಂತಾಮಣಿ ತಾಲೂಕಿನ ಬುರುಡುಗುಂಟೆ ಸಮೀಪದ ಕೊಮ್ಮಸಂದ್ರ ವೆಂಕಟೇಶ್ (40)ಮತ್ತು ಸರಸ್ವತಮ್ಮ (33) ಮೃತಪಟ್ಟ ದಂಪತಿ.
ಚಿಂತಾಮಣಿ ತಾಲೂಕಿನ ನಾರಾಯಣಹಳ್ಳಿಯಲ್ಲಿ ಸಂಬಂಧಿ ಸುರೇಶ್ ಮತ್ತು ಸ್ನೇಹಿತರು ಶಬರಿಮಲೆ ಯಾತ್ರೆಗೆ ತೆರಳುತ್ತಿರುವ ಹಿನ್ನೆಲೆಯಲ್ಲಿ ಕೈಗೊಂಡಿದ್ದ ಇರುಮುಡಿ ಪೂಜೆಗೆ ಇಬ್ಬರು ಹೋಗುತ್ತಿದ್ದರು. ಕೊಮ್ಮಸಂದ್ರ ಗ್ರಾಮದಿಂದ ಚಿಂತಾಮಣಿ ಮೂಲಕ ನಾರಾಯಣಹಳ್ಳಿಗೆ ಬರುತ್ತಿದ್ದ ಸಂದರ್ಭದಲ್ಲಿ ಆದರ್ಶ ಚಿತ್ರಮಂದಿರ ಸಮೀಪದ ರಸ್ತೆಯಲ್ಲಿ ಅಪಘಾತ ಸಂಭವಿಸಿದೆ. ಆಕಸ್ಮಿಕವಾಗಿ ಬೈಕ್‌ನೊಂದಿಗೆ ಆಯತಪ್ಪಿ ದಂಪತಿ ಸಹ ರಸ್ತೆಗೆ ಉರುಳಿ ಬಿದ್ದಿದ್ದಾರೆ. ಇದೇ ವೇಳೆ ಶಿಡ್ಲಘಟ್ಟದಿಂದ ಚಿಂತಾಮಣಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ರಸ್ತೆಯಲ್ಲಿ ಬಿದ್ದ ದಂಪತಿಯ ಮೇಲೆ ಬಸ್ಸು ಹರಿದಿದೆ. ಇದರಿಂದ ದಂಪತಿ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಚಿಂತಾಮಣಿ ನಗರ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.