ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ನಿವೃತ್ತ ಶಿಕ್ಷಕಿಯನ್ನು ಕಟ್ಟಿಹಾಕಿ ಚಿನ್ನಾಭರಣ ದೋಚಿದ್ದ ದಂಪತಿ ಬಂಧನ

arrested
Published on

ಮೈಸೂರು: ಬಾಡಿಗೆಗೆ ಮನೆ ಕೇಳುವ ನೆಪದಲ್ಲಿ ನಿವೃತ್ತ ಶಿಕ್ಷಕಿಯನ್ನು ಕಟ್ಟಿಹಾಕಿ ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ಭೇದಿಸಿರುವ ಹೆಬ್ಬಾಳು ಠಾಣೆಯ ಪೊಲೀಸರು, ಹಾಸನದಲ್ಲಿ ವಾಸವಿರುವ ಚಿತ್ರದುರ್ಗ ಮೂಲದ ಆರ್.ಡಿ.ವನಿತಾ(24), ಡಿ.ಚೇತನ್(29) ದಂಪತಿಯನ್ನು ಬಂಧಿಸಿದ್ದಾರೆ.


ಆರೋಪಿಗಳಿಂದ 5.50 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ಕಟ್ಟಿಂಗ್ ಪ್ಲೇಯರ್, ಖಾರದಪುಡಿ ಇನ್ನಿತರ ವಸ್ತುಗಳನ್ನು ಜಪ್ತಿ ಮಾಡಲಾಗಿದೆ. ಹೆಬ್ಬಾಳು 1ನೇ ಹಂತದ ನಿವಾಸಿ ನಿವೃತ್ತ ಶಿಕ್ಷಕಿ ಶಾಂತಮ್ಮ ಅವರು ಜು.10ರಂದು ಮನೆಯಲ್ಲಿದ್ದಾಗ ಆರೋಪಿ ದಂಪತಿ ಬಾಡಿಗೆಗೆ ಮನೆ ಬೇಕಾಗಿದೆ ಎಂದು ಬಂದಿದ್ದಾರೆ. ಮನೆ ಖಾಲಿ ಇದ್ದ ಕಾರಣ ಅವರನ್ನು ಕರೆದು ಮನೆಯೊಳಗೆ ಕೂರಿಸಿದ ಶಾಂತಮ್ಮ, ಅವರ ಬಗ್ಗೆ ವಿಚಾರಿಸಿದ್ದಾರೆ.


ಮನೆ ಒಪ್ಪಿಗೆಯಾಗಿದೆ ಎಂದ ದಂಪತಿ ಎಟಿಎಂನಲ್ಲಿ ಹಣ ಡ್ರಾ ಮಾಡಿಕೊಂಡು ಮುಂಗಡವಾಗಿ ಹಣ ನೀಡುತ್ತೇವೆ ಎಂದು ಹೇಳಿ ತೆರಳಿದ್ದಾರೆ. ಮತ್ತೆ ಮಧ್ಯಾಹ್ನ 3 ಗಂಟೆಗೆ ವಾಪಸ್ ಶಾಂತಮ್ಮ ಅವರ ಬಳಿ ಬಂದು, ಎಟಿಎಂ ಕಾರ್ಡ್ ವರ್ಕ್ ಆಗುತ್ತಿಲ್ಲ.

ಊರಿಗೆ ಹೋಗಿ ಶುಕ್ರವಾರ ಸಾಮಾನುಗಳ ತೆಗೆದುಕೊಂಡು ಬಂದು, ಆ ದಿನವೇ ಅಡ್ವಾನ್ಸ್ ನೀಡಿ, ಹಾಲು ಉಕ್ಕಿಸಿ ಮನೆಗೆ ಬರುತ್ತೇವೆ ಎಂದು ಹೇಳಿದ್ದಾರೆ. ಬೆಂಗಳೂರಿಗೆ ತೆರಳಲು ಸಂಜೆ ರೈಲಿದ್ದು, ಅಲ್ಲಿಯವರೆಗೆ ಮನೆಯಲ್ಲೇ ಇರುವುದಾಗಿ ಹೇಳಿ ಕೀ ಪಡೆದು ತೆರಳಿದ್ದಾರೆ. ಕೆಲ ಹೊತ್ತಿನ ಬಳಿ ಶಾಂತಮ್ಮ ಅವರ ಮನೆಗೆ ಬಂದ ಇಬ್ಬರು ಕುಡಿಯಲು ನೀರು ಕೇಳಿ ಒಳಗೆ ಬಂದಿದ್ದಾರೆ.


ಅವರು ಅಡುಗೆ ಮನೆಗೆ ಹೋಗಿ ಬಾಟಲಿಗೆ ನೀರು ತುಂಬಿಸಿ ಕೊಳ್ಳುತ್ತಿದ್ದಾಗ ಹಿಂದಿನಿಂದ ಹೋಗಿದ್ದಾರೆ. ಅವರ ಹಿಡಿದು ಕೈ ಕಾಲು ಕಟ್ಟಿ ಹಾಕಿ ಕೊರಳಲ್ಲಿದ್ದ 65 ಗ್ರಾಂ ಮಾಂಗಲ್ಯ ಸರ ಕಿತ್ತುಕೊಂಡು, ಕಟ್ಟಿಂಗ್ ಪ್ಲೇಯರ್‌ನಿಂದ ಕೈಯಲ್ಲಿದ್ದ 12 ಗ್ರಾಂ ಚಿನ್ನದ ಬಳೆಯನ್ನು ಕತ್ತರಿಸಿಕೊಂಡು ಪರಾರಿಯಾಗಿದ್ದಾರೆ.


ಮನೆಯೊಳಗೆ ಶಾಂತಮ್ಮ ಕೂಗಾಟವನ್ನು ಕೇಳಿದ ಪಕ್ಕದ ನಿವಾಸಿಗಳು ಬಂದು ರಕ್ಷಣೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ದಂಪತಿಯನ್ನು ನಗರದ ರೈಲ್ವೆ ನಿಲ್ದಾಣದಲ್ಲಿ ಬಂಧಿಸಿದ್ದಾರೆ.


ಹೆಬ್ಬಾಳು ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಎ.ಮಲ್ಲೇಶ, ಎಸ್‌ಐಗಳಾದ ಕೀರ್ತಿ ಮತ್ತು ಪ್ರವೀಣ್, ಸಿಬ್ಬಂದಿಯಾದ ಹರೀಶ್, ಮಹೇಶ್ ಹೊಸಮನಿ, ವೆಂಕಟೇಶ್, ಸುಭಾನಲ್ಲಾ ಬಾಲ್ದಾರ್, ಆಶಾ, ಸೆಲ್ವ ಕುಮಾರ್ ಪತ್ತೆ ಕಾರ್ಯದಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net