ಭಿನ್ನಕೋಮಿನ ಜೋಡಿ ಪೊಲೀಸ್ ವಶ - ಜೂಸ್ ಕುಡಿಯುತ್ತಿದ್ದವರ ಮೇಲೆ ಸಂಘಟನೆ ಕಾರ್ಯಕರ್ತರ ಕಣ್ಣು

Published on

ಪುತ್ತೂರು: ಕಾಲೇಜು ವಿದ್ಯಾರ್ಥಿನಿಯೊಬ್ಬಳು ಇನ್ನೊಂದು ಸಮುದಾಯದ ಯುವಕನೊಂದಿಗೆ ಹೋಟೆಲ್‌ನಲ್ಲಿ ಜೂಸ್ ಕುಡಿಯುವುದನ್ನು ಗಮನಿಸಿದ ಹಿಂದುಪರ ಸಂಘಟನೆ ಕಾರ್ಯಕರ್ತರು ಅವರನ್ನು ಪೊಲೀಸರಿಗೊಪ್ಪಿಸಿದ್ದಾರೆ.

ಮೂಲತಃ ಶಿವಮೊಗ್ಗದ ಯುವತಿ ಪ್ರಥಮ ವರ್ಷದ ಪದವಿ ವ್ಯಾಸಂಗ ಮಾಡುತ್ತಿದ್ದು, ನೆಹರು ನಗರದ ಪಿಜಿಯಲ್ಲಿ ವಾಸವಿದ್ದಾಳೆ. ಮಂಗಳವಾರ ಬೆಳಗ್ಗೆ ಪುತ್ತೂರು ಬಸ್ ನಿಲ್ದಾಣ ಬಳಿಯ ಜೂಸ್‌ಪಾರ್ಲರ್‌ನಲ್ಲಿ ಅನ್ಯಧರ್ಮದ ಯುವಕನ ಜತೆ ಜ್ಯೂಸ್ ಕುಡಿಯಲು ತೆರಳಿದ್ದಳು. ಜೋಡಿಯನ್ನು ಗಮನಿಸಿದ ಸ್ಥಳೀಯರು, ಹಿಂದು ಸಂಘಟನೆ ಕಾರ್ಯಕರ್ತರಿಗೆ ಮಾಹಿತಿ ನೀಡಿದ್ದರು. ಅವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನೂ ಪುತ್ತೂರು ಮಹಿಳಾ ಠಾಣೆಗೆ ಕರೆದುಕೊಂಡು ಹೋಗಿ ವಿಚಾರಿಸಿದ್ದಾರೆ. ಯುವಕ ಹಾಗೂ ಯುವತಿ ಒಂದೇ ಊರಿನವರಾಗಿದ್ದು, ಪರಸ್ಪರ ಪರಿಚಿತರೆಂದು ತಿಳಿದು ಬಂದಿದೆ. ವಿದ್ಯಾರ್ಥಿನಿ ಮನೆಯವರಿಗೆ ಘಟನೆ ಬಗ್ಗೆ ಮಾಹಿತಿ ನೀಡಿದ್ದು, ಅವರು ಯುವಕನ ಬಗ್ಗೆ ಸದಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಪುತ್ತೂರು ಬಿಜೆಪಿ ನಿಯೋಗ ಠಾಣೆಗೆ ತೆರಳಿ ಯುವಕನ ವಿರುದ್ಧ ಪ್ರಕರಣ ದಾಖಲಿಸುವಂತೆ ಒತ್ತಾಯಿಸಿದೆ. ಯುವತಿ ಮನೆಯವರು ಠಾಣೆಯಲ್ಲಿ ನೀಡಿದ ಹೇಳಿಕೆ ತಿಳಿಸಿದ ಬಳಿಕ ನಿಯೋಗ ಅಲ್ಲಿಂದ ಹಿಂದಿರುಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net