ಜನಮುಖಿ ಬಜೆಟ್‌ನಿಂದ ದೇಶದ ಪ್ರಗತಿ: ಡಾ.ಆರ್.ಎಚ್. ಪವಿತ್ರಾ ಅಭಿಪ್ರಾಯ

10
Published on

ಮೈಸೂರು: ಯಾವ ದೇಶ ಉತ್ತಮವಾದ, ಜನಮುಖಿಯಾದ ಬಜೆಟ್ ಮಂಡಿಸುತ್ತದೆಯೋ, ಆ ದೇಶ ಆರ್ಥಿಕವಾಗಿ ಮುಂದುವರಿಯಲು ಸಾಧ್ಯವಾಗುತ್ತದೆ ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಅರ್ಥಶಾಸ್ತ್ರ ವಿಭಾಗದ ಪ್ರಾಧ್ಯಾಪಕಿ ಡಾ.ಆರ್.ಎಚ್. ಪವಿತ್ರಾ ಹೇಳಿದರು.

ಶ್ರೀ ನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಅರ್ಥಶಾಸ್ತ್ರ ವಿಭಾಗದಿಂದ ವಿದ್ಯಾರ್ಥಿನಿಯರಿಗಾಗಿ ಶನಿವಾರ ಆಯೋಜಿಸಿದ್ದ ಕೇಂದ್ರ ಬಜೆಟ್ ವಿಶ್ಲೇಷಣೆ: 2025-26 ಎಂಬ ವಿಷಯದ ಬಗ್ಗೆ ಅವರು ವಿಶೇಷ ಉಪನ್ಯಾಸ ನೀಡಿದರು.

ಜನಮುಖಿ ಬಜೆಟ್‌ನಿಂದ ಸಮಬಾಳು-ಸಮಪಾಲು ಎಂಬ ಮಾತಿಗೆ ಅರ್ಥ ಒದಗಿಸಿದಂತಾಗುತ್ತದೆ. ಇದನ್ನು ಯಾವುದೇ ದೇಶದ ಬಜೆಟ್ ಅಳವಡಿಸಿಕೊಳ್ಳುವುದು ಅಗತ್ಯ. ಯಾವ ದೇಶ ಉತ್ತಮವಾದ, ಜನಮುಖಿ ಬಜೆಟ್ ಮಂಡಿಸುತ್ತದೆಯೋ ಆಗ ಅದು ಆರ್ಥಿಕವಾಗಿ ಅಭಿವೃದ್ಧಿ ಕಾಣುತ್ತದೆ ಎಂದರು.

ಬಜೆಟ್ ತಯಾರಾಗುವ ವಿಧಾನ, ಈ ಬಾರಿಯ ಬಜೆಟ್‌ನ ಗಾತ್ರ, ವಲಯವಾರು ಹಣದ ಹಂಚಿಕೆ, ಆದಾಯದ ಮೂಲ, ವೆಚ್ಚದ ಪ್ರಮಾಣ, ಬಜೆಟ್‌ನ ಮೇಲೆ ಹಣದುಬ್ಬರದ ಪ್ರಭಾವ, ಇವುಗಳನ್ನು ಗಮನದಲ್ಲಿಟ್ಟುಕೊಂಡು ಉಳಿದ ದೇಶಗಳ ಬಜೆಟ್‌ನ ರೀತಿ-ನೀತಿಗಳನ್ನು ಅವಲೋಕಿಸುವುದು ಅವಶ್ಯಕವಾಗಿದೆ ಎಂದು ತಿಳಿಸಿದರು.

ಹೆಣ್ಣು ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಿ ನಡೆಸಿ ಹೇಗೆ ಉನ್ನತ ಹುದ್ದೆಗಳಿಗೆ ಆಯ್ಕೆಯಾಗಬೇಕು ಎಂಬುದನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಯಶಸ್ಸಿಗೆ ನೀವೆ ಕಾರಣಕರ್ತರಾಗಬೇಕು. ಅದರಲ್ಲಿ ಅರ್ಥಶಾಸ್ತ್ರ ವಿಷಯ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿನಿಯರು ಈ ದೃಷ್ಟಿಯಿಂದ ಅವಲೋಕಿಸಬೇಕು ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಶ್ರೀ ನಟರಾಜ ವಿದ್ಯಾಸಂಸ್ಥೆಯ ವಿಶೇಷಾಧಿಕಾರಿ ಪ್ರೊ. ಎಸ್. ಶಿವರಾಜಪ್ಪ ಮಾತನಾಡಿ, ಬಜೆಟ್ ರಾಜಕೀಯ ಪ್ರೇರಿತವಾಗಿರಬಾರದು, ಸಮಾಜಮುಖಿಯಾಗಿರಬೇಕು. ಸಮ ಸಮಾಜದ ನಿರ್ಮಾಣದಲ್ಲಿ ಜನಮುಖಿ ಬಜೆಟ್‌ಗಳು ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ. ಬಜೆಟ್‌ನ ಗಾತ್ರ ಮುಖ್ಯವಲ್ಲ, ಸಮತೋಲನದ ಹಂಚಿಕೆ ಜನಪರವಾಗಿರಬೇಕು, ಶೋಷಿತರಪರವಾಗಿರಬೇಕು ಆಗ ಮಾತ್ರ ಆ ಬಜೆಟ್‌ನ ಮೌಲ್ಯ ಹೆಚ್ಚುತ್ತದೆ ಎಂದರು.

ಶ್ರೀನಟರಾಜ ಮಹಿಳಾ ವಸತಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಡಾ.ಎಂ.ಶಾರದಾ ಮಾತನಾಡಿ, ವಿದ್ಯಾರ್ಥಿ ಜೀವನವನ್ನು ಸದುಪಯೋಗಪಡಿಸಿಕೊಂಡು ನೀವಿರುವ ಮನೆಗಳಲ್ಲಿಯೇ ಸಣ್ಣ ಪ್ರಮಾಣದ ಬಜೆಟ್‌ನ್ನು ತಯಾರಿಸಿ ಉಳಿದವರಿಗೆ ಮಾದರಿಯಾಗಬೇಕು ಎಂದು ಸಲಹೆ ನೀಡಿದರು.

ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ.ಎನ್.ಆರ್.ಸಿಂಧು, ಸಹಾಯಕ ಪ್ರಾಧ್ಯಾಪಕ ಆರ್.ರಾಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net