ಮೈಸೂರಿನಲ್ಲಿ ದೇಶದ ಮೊಟ್ಟ ಮೊದಲ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್ ಸ್ಥಾಪನೆ : ಸಚಿವ ಪ್ರಿಯಾಂಕ್ ಖರ್ಗೆ

Priyank Kharge
Published on

ಮೈಸೂರು: ದೇಶದ ಮೊಟ್ಟ ಮೊದಲ ಪ್ರಿಂಟೆಡ್ ಸರ್ಕ್ಯೂಟ್ ಬೋರ್ಡ್(ಪಿಸಿಬಿ) ಹಾಗು ಪೂರೈಕೆ ಸರಪಳಿ ಕ್ಲಸ್ಟರ್ ನಗರದಲ್ಲಿ ಸ್ಥಾಪನೆಯಾಗುತ್ತಿದ್ದು, ಇದು ಸ್ಥಾಪನೆಯಾದ ಬಳಿಕ ಮೈಸೂರು ನಿಜವಾದ ಅರ್ಥದಲ್ಲಿ ದೇಶದ ಸಿಲಿಕಾನ್ ನಗರವಾಗಲಿದೆ ಎಂದು ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಇನ್ಫೋಸಿಸ್‌ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ದಿ ಮೈಸೂರು ಬಿಗ್‌ಟೆಕ್ ಶೋ’ ಕಾರ್ಯಕ್ರಮದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಸಂದೇಶವನ್ನು ವಾಚನ ಮಾಡಲಾಯಿತು. ಈ ಸಂದೇಶದಲ್ಲಿ ಸಚಿವರು ಪ್ರಿಂಟೆಡ್ ಸರ್ಕ್ಯೂಟ್ ಬೋಡ್ ವಿಚಾರ ಪ್ರಸ್ತಾಪಿಸಿದ್ದಾರೆ.

ಉದ್ಯಮ- ಉದ್ಯಮಿಗಳ ಜತೆಗೆ ನಮ್ಮ ಎಲೆಕ್ಟ್ರಾನಿಕ್ಸ್ ಸಿಸ್ಟಮ್ ಡಿಸೈನ್ ಮ್ಯಾನುಫ್ಯಾಕ್ಚರಿಂಗ್ ನೀತಿಯನ್ನು ಪರಿಷ್ಕರಿಸಲು ಚರ್ಚೆ ನಡೆಯುತ್ತಿದೆ. ಸೆಪ್ಟೆಂಬರ್ ಅಂತ್ಯದೊಳಗೆ ರಾಜ್ಯ ಸರ್ಕಾರ ಗ್ಲೋಬಲ್ ಕ್ಯಾಪಬಿಲಿಟಿ ಸೆಂಟರ್ ನೀತಿಯನ್ನು ಪ್ರಕಟಿಸಲಿದೆ ಎಂದು ಅವರು ತಿಳಿಸಿದ್ದಾರೆ.

ನಾವು ಮೈಸೂರು ಭಾಗದಲ್ಲಿ ವಿಶೇಷ ಪಿಸಿಬಿ ಕ್ಲಸ್ಟರ್‌ಅನ್ನು ಸ್ಥಾಪಿಸಲು ಎದುರು ನೋಡುತಿದ್ದೇವೆ. ಇದು ಇಎಸ್‌ಡಿಎಂ ಮೌಲ್ಯ ಸರಪಳಿ ಹೆಚ್ಚಿಸುತ್ತದೆ ಮತ್ತು ಕರ್ನಾಟಕವನ್ನು ಈ ಕ್ಷೇತ್ರದಲ್ಲಿ ದಿಗ್ಗಜ ರಾಜ್ಯವಾಗಿ ರೂಪಿಸಲಿದೆ. ನವೋದ್ಯಮಗಳಿಗೆ ರಾಜ್ಯ ಸರ್ಕಾರ ಬೆಂಬಲ ನೀಡುತ್ತಿದೆ. ನಮ್ಮ ನವೋದ್ಯಮ ಕೋಶದಲ್ಲಿ ನೋಂದಾಯಿಸಲಾದ ಬೌದ್ಧಿಕ ಆಸ್ತಿ ಹೊಂದಿರುವ ನವೋದ್ಯಮಗಳಿಗೆ ಸರ್ಕಾರದ ಬೆಂಬಲವನ್ನು ಖಚಿತಪಡಿಸಿಕೊಳ್ಳಲು ಸಾರ್ವಜನಿಕ ಖರೀದಿ ನೀತಿಯಲ್ಲಿ ನಾವು ಅವುಗಳಿಗೆ ಆದ್ಯತೆ ನೀಡುವ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿದರು.

ವ್ಯಾಪಾರ ನೆಟ್‌ವರ್ಕಿಂಗ್, ಜ್ಞಾನ ಹಂಚಿಕೆ ಮತ್ತು ಉದ್ಯಮ ಬೆಳವಣಿಗೆಯ ಅವಕಾಶಗಳನ್ನು ಉತ್ತೇಜಿಸಲು ಮೈಸೂರು ಬಿಗ್‌ಟೆಕ್ ಶೋ ಹಮ್ಮಿಕೊಳ್ಳಲಾಗಿದ್ದು, ದೇಶ-ವಿದೇಶದಿಂದ 450ಕ್ಕೂ ಹೆಚ್ಚು ಪ್ರತಿನಿಧಿಗಳು, 45 ಜಾಗತಿಕ ಉಪನ್ಯಾಸಕರು, 60 ವಿದ್ಯಾರ್ಥಿಗಳು, 6 ದೇಶದ ಪಾಲುದಾರರು, 15 ಕಾಲೇಜುಗಳು, 25 ನವೋದ್ಯಮ ಪ್ರದರ್ಶನ ಬೂತ್‌ಗಳು ಮತ್ತು ಇನ್‌ಕ್ಯುಬೇಟರ್‌ಗಳು, ಮಾಧ್ಯಮ ಮತ್ತು ತಂತ್ರಜ್ಞಾನದ ಪಾಲುದಾರರು ಭಾಗವಹಿಸಿದ್ದರು.

ಮಾಹಿತಿ ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಡಾ.ಏಕ್‌ರೂಪ್ ಕೌರ್ ಮಾತನಾಡಿ, ಇನ್ನೆರಡು ದಿನದಲ್ಲಿ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ಕರಡು ನೀತಿ ಪ್ರಕಟಿಸಲಾಗುವುದು. ಬೆಂಗಳೂರು ನಂತರದ ನಗರಗಳಾದ ಮೆಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ, ಬೆಳಗಾವಿ ನಗರವನ್ನು ಗುರಿಯಾಗಿಸಿಕೊಂಡು ಆ ನಗರಗಳಲ್ಲಿ ಮಾಹಿತಿ ತಂತ್ರಜ್ಞಾನ ಆಧಾರಿತ ಕಂಪನಿಗಳ ಆರಂಭ, ನವೋದ್ಯಮಗಳಿಗೆ ಪ್ರೋತ್ಸಾಹ ನೀಡುವ ನೀಡುವ ಉದ್ದೇಶದಿಂದ ನೀತಿ ರೂಪಿಸಲಾಗಿದೆ ಎಂದರು.

ಮೈಸೂರಿಗೆ ಹೊಸದಾಗಿ 8 ಕಂಪನಿಗಳು ಬಂದಿದ್ದು, ಕೋಚನಹಳ್ಳಿಯಲ್ಲಿ ಕೆಗಾರಿಕಾ ಪ್ರದೇಶದಲ್ಲಿ ಸೆಮಿ ಕಂಡಕ್ಟರ್ ಯೋಜನೆ ಜಾರಿಗೊಳಿಸುವುದು ಸೇರಿದಂತೆ ಅನೇಕ ಉದ್ದೇಶವನ್ನು ಹೊಂದಿದೆ. ದ್ವಿತೀಯ ದರ್ಜೆಯ ನಗರಗಳಲ್ಲಿ ಮೈಸೂರು ಎಲ್ಲ ರೀತಿಯ ಸೌಲಭ್ಯವನ್ನು ಹೊಂದಿದ ನಗರವಾಗಿದ್ದು, ಇಲ್ಲಿಗೆ ಅಗತ್ಯವಿರುವ ಎಲ್ಲ ರೀತಿಯ ನೆರವು ನೀಡಲು ಸರ್ಕಾರ ಸಿದ್ಧವಿದೆ ಎಂದರು.
ಇನ್ಫೋಸಿಸ್ ಮೈಸೂರು ಕ್ಯಾಂಪಸ್ ಉಪಾಧ್ಯಕ್ಷ ವಿನಾಯಕ ಹೆಗ್ಡೆ, ಕಂಟ್ರಿ ಸಂಸ್ಥೆ ನಿರ್ದೇಶಕ ನೀರಜ್, ಕೆಡೆಮ್ ಅಧ್ಯಕ್ಷ ಬಿ.ವಿ. ನಾಯ್ಡು, ಕಂಟ್ರಿ ಹೆಡ್ ಇಂಡಿಯಾದ ಉಪಾಧ್ಯಕ್ಷ ಜೀತೇಂದ್ರ ಚಡ್ಡ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net